ತುಮಕೂರು: ಶುಲ್ಕ ಕಟ್ಟದ್ದಕ್ಕೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದಲಿತ ವಿದ್ಯಾರ್ಥಿಗೆ ಅವಮಾನ

ಶಾಲಾ ಶುಲ್ಕ ಪಾವತಿಸದಿದ್ದಕ್ಕೆ ಗಣರಾಜ್ಯೋತ್ಸವ ಸಮಾರಂಭಕ್ಕೆ ಹಾಜರಾಗಲು ಬಂದ ವಿದ್ಯಾರ್ಥಿ ಹಾಗೂ ಆತನ ತಾಯಿಯನ್ನು ಅವಮಾನಿಸಿ ವಾಪಸ್ ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ತುಮಕೂರು: ಶಾಲಾ ಶುಲ್ಕ ಪಾವತಿಸದಿದ್ದಕ್ಕೆ ಗಣರಾಜ್ಯೋತ್ಸವ ಸಮಾರಂಭಕ್ಕೆ ಹಾಜರಾಗಲು ಬಂದ ವಿದ್ಯಾರ್ಥಿ ಹಾಗೂ ಆತನ ತಾಯಿಯನ್ನು ಅವಮಾನಿಸಿ ವಾಪಸ್ ಕಳುಹಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಯಲ್ಲಾಪುರದಲ್ಲಿರುವ ನ್ಯಾಷನಲ್ ಇಂಗ್ಲೀಷ್ ಶಾಲೆಯಲ್ಲಿ 5ನೇ ತರಗತಿಯಲ್ಲಿ ಕಿಶನ್ ಎಂಬ ಬಾಲಕ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.ಈ ವರ್ಷದ ಶುಲ್ಕ ಕಟ್ಟದ ಕಾರಣ ಕಳೆದ 10 ದಿನಗಳಿಂದ ಶಾಲೆಗೆ ಬರದಂತೆ ಮುಖ್ಯೋಪಾಧ್ಯಾಯರು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಕಿಶನ್ ತಾಯಿ ಸ್ಥಳೀಯ ಬಿಇಓ ಅವರನ್ನು ಭೇಟಿ ಮಾಡಿ ಶಾಲೆಗೆ ಬಾಲಕ ತೆರಳಲು ಅನುಮತಿ ಕೊಡಿಸುವಂತೆ ಕೋರಿದ್ದರು. ಕಿಶನ್ ನನ್ನು ಶಾಲೆಗೆ ಬರಲು ಅನುಮತಿ ನೀಡುವಂತೆ ಬಿಇಓ ಬಸವರಾಜು ಮುಖ್ಯೋಪಾಧ್ಯಾಯ ಮಂಜುನಾಥ್ ಅವರಿಗೆ ಸೂಚಿಸಿದ್ದರು.

ಅದರಂತೆ ಜನವರಿ 26 ರಂದು ಶಾಲೆಯಲ್ಲಿ ನಡೆಯುತ್ತಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಕಿಶನ್ ತನ್ನ ತಾಯಿ ಪ್ರೇಮಾ ಜೊತೆ ಆಗಮಿಸಿದ್ದ. ಈ ವೇಳೆ ಕಿಶನ್ ನ್ನು ನೋಡಿದ ಕೂಡಲೇ ಜೋರಾಗಿ ಕೂಗಾಡಿದ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ್, ಫೀಸು ಕಟ್ಟುವವರೆಗೂ ಶಾಲೆಗೆ ಬರದಂತೆ ಹೇಳಿ, ಎಲ್ಲರೆದರು ಹೀಯಾಳಿಸಿದರು ಎಂದು ಪ್ರೇಮಾ ಆರೋಪಿಸಿದ್ದಾರೆ.

ನಾನು ಎಂಜಿನೀಯರ್ ಆಗಬೇಕೆಂದು ಬಯಸಿದ್ದೇನೆ, ಶುಲ್ಕ ಪಾವತಿಸದ ಕಾರಣ ನನಗೆ ಶಾಲೆಗೆ ತೆರಳಲು ಅನುಮತಿ ನೀಡುತ್ತಿಲ್ಲ, ಪ್ರತಿನಿತ್ಯ ಪಾಠ ಪ್ರವಚನಗಳಿಂದ ವಂಚಿತನಾಗುತ್ತಿದ್ದೇನೆ ಎಂದು ಕಿಶನ್ ಅಳಲು ತೋಡಿಕೊಂಡಿದ್ದಾನೆ.

ಕಿಂಡರ್ ಗಾರ್ಟನ್ ನಿಂದ ಕಿಶನ್ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇಲ್ಲಿಯವರೆಗೂ ಸರಿಯಾಗಿ ಫೀಸು ಕಟ್ಟುತ್ತಿದ್ದೆವು, ನನ್ನ ಪತಿ ಬ್ಯಾಗ್ ಹೊಲಿದು ಹಣ ಹೊಂದಿಸುತ್ತಿದ್ದರು, ಆದರೆ ಈ ಬಾರಿ ನೋಟು ನಿಷೇಧದ ನಂತರ ಬ್ಯಾಗ್ ಗಳಿಗೆ ಬೇಡಿಕೆ ಕಡಿಮೆಯಾದದ್ದರಿಂದ ಹಣದ ತೊಂದರೆಯಿಂದಾಗಿ ಕೇವಲ 5 ಸಾವಿರ ರು ಮಾತ್ರ ಫೀಸು ಕಟ್ಟಿದ್ದೆವು. ಆದರೆ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಹಣ ಕಟ್ಟಲು ಸಾಧ್ಯವಾಗಿರಲಿಲ್ಲ ಎಂದು ಕಿಶನ್ ತಾಯಿ ಪ್ರೇಮಾ ತಿಳಿಸಿದ್ದಾರೆ.

ಈ ಸಂಬಂಧ ಬಿಇಓ ಬಸವರಾಜು ಅವರನ್ನು ಸಂಪರ್ಕಿಸಿದಾಗ ಮತ್ತೊಮ್ಮೆ ಮುಖ್ಯೋಪಾಧ್ಯಾಯರ ಜೊತೆ ಮಾತುಕತೆ ನಡೆಸಿ ಬಾಲಕನಿಗೆ ಶಾಲೆಗೆ ತೆರಳಲು ಅನುಮತಿ ಕೊಡಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com