ವಿವಾದದಲ್ಲಿ ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ವಿಚಾರ: ಒಂದೇ ರಾಷ್ಟ್ರ, ಒಂದೇ ಧ್ವಜ; ಕೇಂದ್ರ ಗೃಹ ಇಲಾಖೆ

ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದುವ ಯಾವುದೇ ಅವಕಾಶ ಸಂವಿಧಾನದಲ್ಲಿಲ್ಲ, ತ್ರಿವರ್ಣ ಧ್ವಜವೇ ಭಾರತದ ರಾಷ್ಟ್ರಧ್ವಜ, ಒಂದೇ ರಾಷ್ಟ್ರ, ಒಂದೇ ಧ್ವಜ ...
ರಾಷ್ಟ್ರಧ್ವಜ ಮತ್ತು ಕರ್ನಾಟಕ ಧ್ವಜ
ರಾಷ್ಟ್ರಧ್ವಜ ಮತ್ತು ಕರ್ನಾಟಕ ಧ್ವಜ
ಬೆಂಗಳೂರು: ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದುವ ಯಾವುದೇ ಅವಕಾಶ ಸಂವಿಧಾನದಲ್ಲಿಲ್ಲ, ತ್ರಿವರ್ಣ ಧ್ವಜವೇ ಭಾರತದ ರಾಷ್ಟ್ರಧ್ವಜ, ಒಂದೇ ರಾಷ್ಟ್ರ, ಒಂದೇ ಧ್ವಜ ಎಂಬ ನೀತಿಗೆ ಎಲ್ಲಾ ರಾಜ್ಯಗಳು ಬದ್ಧವಾಗಿರಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಸೂಚನಿ ನೀಡಿದೆ. 
ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜ ರೂಪಿಸಿ, ಅದಕ್ಕೆ ಕಾನೂನು ಮಾನ್ಯತೆ ನೀಡುವ ಸಲುವಾಗಿ ಪರಾಮರ್ಶಿಸಲು ರಾಜ್ಯ ಸರಕಾರ, ಒಂಬತ್ತು ಮಂದಿಯ ಸಮಿತಿ ರಚಿಸಿದ್ದು, ಇದು ರಾಷ್ಟ್ರವ್ಯಾಪಿ ವಿವಾದಕ್ಕೆ ಕಾರಣವಾಗಿದೆ. 
ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ ಸರಕಾರ, ಪ್ರತ್ಯೇಕ ಧ್ವಜ ಇದ್ದರೆ ತಪ್ಪೇನು  ಎಂದು ಪ್ರಶ್ನಿಸಿರುವ ಸಿಎಂ ಸಿದ್ದರಾಮಯ್ಯ ಪ್ರತ್ಯೇಕ ನಾಡಧ್ವಜದ ವಿಷಯವನ್ನು ಸಮರ್ಥಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ ನಾಡಗೀತೆ ಅಧಿಕೃತವಾಗಿ ಇದೆ. ಅದೇ ರೀತಿ ನಾಡ ಧ್ವಜ ಇದ್ದರೆ ತಪ್ಪೇನೂ ಇಲ್ಲ. ಧ್ವಜ ರೂಪಿಸುವ ಸಂಬಂಧ ಸಮಿತಿ ರಚಿಸಲಾಗಿದೆ. ವರದಿ ಬಂದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
‘ಕನ್ನಡ ನಾಡಧ್ವಜವನ್ನು ವಿನ್ಯಾಸಗೊಳಿಸಿ ಅದಕ್ಕೆ ಕಾನೂನಿನ ಸ್ವರೂಪ ನೀಡಬೇಕು ಎಂದು ಡಾ. ಪಾಟೀಲ ಪುಟ್ಟಪ್ಪ ಅವರೂ ಸೇರಿದಂತೆ ಹಲವಾರು ಕನ್ನಡಪರ ಹೋರಾಟಗಾರರು ಮನವಿ ಸಲ್ಲಿಸಿದ್ದಾರೆ’ ಎಂದೂ ವಿವರಿಸಿದರು.
ನಾವು ಒಂದೇ ದೇಶದಲ್ಲಿದ್ದೇವೆ,  ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದುವ ಯಾವುದೇ ಕಾನೂನಿಗೆ ಅವಕಾಶವಿಲ್ಲ ಎಂದು ಕೇಂದ್ರ ಗೃಹ ಇಲಾಖೆ ವಕ್ತಾರರು ಹೇಳಿದ್ದಾರೆ. ಈಗಾಗಲೇ ಕರ್ನಾಟಕ ಪ್ರತ್ಯೇಕ ಧ್ವಜ ಹೊಂದಿದೆ ಎಂದು ಹೇಳಿರುವ ಗೃಹ ಸಚಿವಾಲಯ ಧ್ವಜ ಜನರನ್ನು ಪ್ರತಿನಿಧಿಸುತ್ತದೆಯೇ ಹೊರತು ಸರ್ಕಾರವನ್ನಲ್ಲ ಎಂದು ತಿಳಿಸಿದೆ.
ನಾಡ ಧ್ವಜವನ್ನ ಗಣರಾಜ್ಯೋತ್ಸವ ಅಥವಾ ಸ್ವತಂತ್ರ್ಯ ದಿನಾಚರಣೆ ವೇಳೆ ಬಳಸಲಾಗುವುದಿಲ್ಲ, ರಾಜ್ಯದ ಸಂಸ್ಥಾಪನಾ ದಿನದಲ್ಲಿ ಮಾತ್ರ ಹಾರಿಸಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರತ್ಯೇಕ ನಾಡಧ್ವಜದ ವಿಚಾರವನ್ನು ಕೆಲ ಜನಗಳು ಕೋರ್ಟ್ ನಲ್ಲಿ ಪ್ರಶ್ನಿಸಬಹುದು ಅವಕಾಶವಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ, 
ಒಂದು ವೇಳೆ ಪ್ರತ್ಯೇಕ ನಾಡ ಧ್ವಜ ಹೊಂದುವ ಅವಕಾಶ ಸಿಕ್ಕರೇ ದೇಶದಲ್ಲಿ ಪ್ರತ್ಯೇಕ ಧ್ವಜ ಹೊಂದಿದ ಎರಡನೇ ರಾಜ್ಯ ಕರ್ನಾಟಕವಾಗುತ್ತದೆ. ಜಮ್ಮು ಕಾಶ್ಮೀರ ಸಂವಿಧಾನದ 370ನೇ ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿದ್ದು, ಪ್ರತ್ಯೇಕ ಧ್ವಜ ಹೊಂದಿರುವ ಮೊದಲ ರಾಜ್ಯವಾಗಿದೆ.
ಭಾರತದಲ್ಲಿ ಒಂದು ದೇಶ ಒಂದೇ ಧ್ವಜ ನೀತಿ ಇದ್ದು ಕರ್ನಾಟಕಕ್ಕೆ ಮತ್ತೇಕೆ ಇನ್ನೊಂದು ಧ್ವಜ ಎಂದು ವಿಪಕ್ಷ ಬಿಜೆಪಿ ಪ್ರಶ್ನಿಸಿದೆ. ಸಂವಿಧಾನದಲ್ಲಿ ಪ್ರತ್ಯೇಕ ಧ್ವಜ ಮಾಡಲು ಅವಕಾಶವಿಲ್ಲ, ಇದಕ್ಕೆ ಸಮಿತಿ ರಚಿಸುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದೆ.
ರಾಜ್ಯಕ್ಕೆ ಪ್ರತ್ಯೇಕ ಧ್ವಜ ರೂಪಿಸಿ, ಕಾನೂನು ಚೌಕಟ್ಟು ನೀಡಲು ಜೂನ್‌  6ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ.
ಇನ್ನೂ ಸಿದ್ದರಾಮಯ್ಯ ಅವರ ಈ ತೀರ್ಮಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದೆ. ಸಿಎಂ ಜೊತೆ ಈ ಸಂಬಂಧ ಚರ್ಚಿಸುವುದಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ. 
ಸರ್ಕಾರದ ನಡೆಗೆ ರಾಜ್ಯದ ಸಾಹಿತಿಗಳು ಬೆಂಬಲ ಸೂಚಿಸಿದ್ದು ಪ್ರತ್ಯೇಕ ನಾಡಧ್ವಜ ಇದ್ದರೇ ತಪ್ಪೆನಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com