ಬೆಂಗಳೂರು: ಆಹಾರಗಳನ್ನು ವೃತ್ತ ಪತ್ರಿಕೆಗಳಲ್ಲಿ ಪ್ಯಾಕ್ ಮಾಡುವುದನ್ನು ನಿಷೇಧಿಸಿ ಆಹಾರ ಸುರಕ್ಷತಾ ಆಯೋಗ ಆದೇಶ ಹೊರಡಿಸಿದೆ.
ರಾಜ್ಯದ 8 ಜಿಲ್ಲೆಗಳಲ್ಲಿ ಆಹಾರ ಪ್ಯಾಕ್ ಮಾಡಲು ವೃತ್ತ ಪತ್ರಿಕೆ ಬಳಕೆ ಮಾಡುವುದನ್ನು ನಿಷೇದಿಸಿ ಆದೇಶ ಹೊರಡಿಸಲಾಗಿದೆ. ವೃತ್ತ ಪತ್ರಿಕೆಗೆ ಬಳಸುವ ಇಂಕ್ ಆಹಾರದ ಜೊತೆ ನೇರ ಸಂಪರ್ಕ ಹೊಂದುವ ಕಾರಣ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಬೃಬತ್ ಬೆಂಗಳೂರು ಮಹಾನಗರ ಪಾಲಿಕೆ, ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಹಾಗೂ ತುಮಕೂರು ನಗರ ಕಾರ್ಪೋರೇಷನ್ ಗಳ ವ್ಯಾಪ್ತಿಯಲ್ಲಿ ಯಾವುದೇ ಆಹಾರ ಪ್ಯಾಕ್ ಮಾಡಲು ಪ್ರಿಂಟ್ ಮಾಡಿದಂತ ಪೇಪರ್ ಗಳನ್ನು 1 ವರ್ಷದ ಕಾಲ ಬಳಸುವಂತಿಲ್ಲ ಎಂದು ಆಹಾರ ಸುರಕ್ಷತಾ ಆಯೋಗ ಸೂಚಿಸಿದೆ.
ಪೇಪರ್ ಗಳಲ್ಲಿನ ಶಾಹಿ ಆಹಾರ ಪದಾರ್ಥಗಳ ಜೊತೆ ಸೇರಿ ವಿಷಪೂರಿತವಾಗುವ ಸಾಧ್ಯತೆಯಿದೆ. ಹೀಗಾಗಿ ಇಂಥ ಆಹಾರ ಸೇವಿಸುವುದು ಅಸುರಕ್ಷಿತವಾಗಿರುತ್ತದೆ ಎಂದು ಹೇಳಿದೆ. ಗ್ರಾಹಕರು ಈ ಆಹಾರ ಸೇವಿಸುವುದರಿಂದ ಫುಡ್ ಪಾಯ್ಸನ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಮೊದಲ ಹಂತವಾಗಿ 8 ಜಿಲ್ಲೆಗಳಲ್ಲಿ ವೃತ್ತ ಪತ್ರಿಕೆ ನಿಷೇಧ ಮಾಡಲಾಗಿದ್ದು, ಹಂತಹಂತವಾಗಿ ರಾಜ್ಯಾದ್ಯಂತ ನಿಷೇಧಿಸಲಾಗಿಸುವುದು ಎಂದು ಆಹಾರ ಮತ್ತು ಸುರಕ್ಷತಾ ಆಯೋಗದ ಆಯುಕ್ತ ಸುಬೋದ್ ಯಾದವ್ ಹೇಳಿದ್ದಾರೆ.