ಬೆಂಗಳೂರು: ಮೂರು ವರ್ಷಗಳ ಹಿಂದೆ ಐಸಿಸ್ ಉಗ್ರರಿಂದ ಇರಾನ್ ನ ಮೊಸುಲ್ ನಗರದಿಂದ ಅಪಹರಣಕ್ಕೀಡಾದ 39 ಮಂದಿ ಭಾರತೀಯರನ್ನು ವಾಪಸ್ಸು ಕರೆತರಲು ಭಾರತ ಸರ್ಕಾರದ ಪ್ರಯತ್ನ ಶೂನ್ಯವಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಅಲ್ಲದೆ ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ಪ್ರಧಾನಿ ಮೋದಿಯವರು ಭೇಟಿ ನೀಡಿದ್ದರ ಫಲಿತಾಂಶವೇನು ಎಂದು ಪ್ರಶ್ನಿಸಿದೆ.
ಬೆಂಗಳೂರಿನಲ್ಲಿಂದು ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಎನ್.ಎ.ಹ್ಯಾರಿಸ್, ಐಸಿಸ್ ಉಗ್ರರಿಗೆ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಕರೆತರುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಕಳೆದ ಆರು ತಿಂಗಳಿನಿಂದ ಈ ವಿಷಯ ಬಾಕಿ ಉಳಿದಿದೆ. ನಮ್ಮ ಸರ್ಕಾರ ಏನು ಮಾಡುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಐಸಿಸ್ ಉಗ್ರರ ಬಳಿ ಸಿಕ್ಕಿಹಾಕಿಕೊಂಡಿರುವ ಮುಗ್ಧ ಜನರ ಕುಟುಂಬದವರು ಕಷ್ಟಪಡುತ್ತಿದ್ದಾರೆ. ನಮ್ಮ ದೇಶದ ಪ್ರಯತ್ನ ಶೂನ್ಯವಾಗಿದೆ. ಮಧ್ಯ ಪ್ರಾಚ್ಯಾಕ್ಕೆ ಭೇಟಿ ನೀಡಿರುವ ಪ್ರಧಾನಿಯವರ ಸಾಧನೆಯೇನು ಎಂದು ಕೇಳಿದರು.
ಇದರ ಹೊಣೆಯನ್ನು ವಿದೇಶಾಂಗ ಸಚಿವಾಲಯ ಹೊರಬೇಕು. ವಿದೇಶಗಳಲ್ಲಿರುವ ಭಾರತೀಯರು ತೊಂದರೆಯಲ್ಲಿದ್ದರೆ ಭಾರತ ಸರ್ಕಾರ ಸಹಾಯ ಮಾಡದಿದ್ದರೆ ಮತ್ತೆ ಯಾರು ಮಾಡಬೇಕು ಎಂದು ಅವರು ಪ್ರಶ್ನಿಸಿದರು.