ಮಧ್ಯವರ್ತಿಗಳಿಗೆ ಲಾಭ: ಟೊಮ್ಯಾಟೊ ಬೆಳೆಗಾರರು ಮತ್ತು ಗ್ರಾಹಕರಿಗೆ ಹೊಡೆತ

ಟೊಮ್ಯಾಟೊಗಳ ಬೇಡಿಕೆ ಹೆಚ್ಚಳ ಮತ್ತು ಪೂರೈಕೆಯಲ್ಲಿ ಕುಂಠಿತವಾಗಿರುವುದು ಮಧ್ಯ ವರ್ತಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಧಾರವಾಡ: ಟೊಮ್ಯಾಟೊಗಳ ಬೇಡಿಕೆ ಹೆಚ್ಚಳ ಮತ್ತು ಪೂರೈಕೆಯಲ್ಲಿ ಕುಂಠಿತವಾಗಿರುವುದು ಮಧ್ಯ ವರ್ತಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಲಾಭ ಮಾಡಿಕೊಳ್ಳಲು ಅನುಕೂಲವಾಗಿದೆ. ಇಲ್ಲಿ ರೈತರಿಗೆ ಇದರ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಮತ್ತು  ಗ್ರಾಹಕರಿಗೆ ಇದರ ಬಿಸಿ ತಟ್ಟಿದೆ. 
ಕಳೆದೊಂದು ತಿಂಗಳಿನಿಂದ ಟೊಮ್ಯಾಟೊ ಬೆಲೆ ಹೆಚ್ಚಾದರೂ ಕೂಡ ರೈತರಿಗೆ ಇಡೀ ದಿನ ಮಾರುಕಟ್ಟೆಯಲ್ಲಿ ಕುಳಿತು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಅವರು ಅದನ್ನು ಸಗಟು ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳು ಕೇಳುವ ದರಕ್ಕೆ ಮಾರಾಟ ಮಾಡುತ್ತಾರೆ.
ಅಲ್ಲಿ ಮಧ್ಯವರ್ತಿಗಳು ಶೇಕಡಾ 70ರವರೆಗೆ ಲಾಭ ಮಾಡಿಕೊಳ್ಳುತ್ತಿದ್ದು, ಟೊಮ್ಯಾಟೊ ಬೆಳೆದು ರೈತರಿಗೆ ಶೇಕಡಾ 50ರಷ್ಟು ಲಾಭ ಸಿಗುತ್ತದೆಯಷ್ಟೆ.ಟೊಮ್ಯಾಟೊಗೆ ಹೆಚ್ಚಾಗಿರುವ ಬೇಡಿಕೆಯನ್ನು ಮನಗಂಡು ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳು ಮತ್ತು ಚಿಲ್ಲರೆ ಮಾರಾಟಗಾರರು ಬೆಲೆ ಹೆಚ್ಚಿಸಿದ್ದಾರೆ. ಮಧ್ಯವರ್ತಿಗಳೇ ಬೆಲೆ ನಿರ್ಧರಿಸುತ್ತಾರೆ ಎಂದು ಕೆಲವು ರೈತರು ಹೇಳುತ್ತಾರೆ.
ನಾವು ಜಮೀನಿನಲ್ಲಿ ಬೆಳೆ ಬೆಳೆಯುತ್ತೇವೆ. ಆದರೆ ಅದರ ಲಾಭ ಬೇರೆಯವರು ಮಾಡಿಕೊಳ್ಳುತ್ತಾರೆ. ಟೊಮ್ಯಾಟೊವನ್ನು ಕೊಯ್ದು ಮೂರು ದಿನಕ್ಕಿಂತ ಹೆಚ್ಚು ದಿನ ಇಡಲು ಸಾಧ್ಯವಾಗದ ಕಾರಣ ನಮಗೆ ಸಿಕ್ಕಿದ ಉತ್ತಮ ದರಕ್ಕೆ ನಾವು ಮಾರಾಟ ಮಾಡಲೇಬೇಕು ಎನ್ನುತ್ತಾರೆ ಧಾರವಾಡದ ರೈತರೊಬ್ಬರು.
ನಾವು 8 ಕೆಜಿ ಟೊಮ್ಯಾಟೊವನ್ನು 350ರಿಂದ 450 ರೂಪಾಯಿಗೆ ಮಾರಾಟ ಮಾಡುತ್ತೇವೆ. ಟೊಮ್ಯಾಟೊ ಸಾಗಾಟದ ವೆಚ್ಚ ಮತ್ತು ಕಾರ್ಮಿಕರ ಸಂಬಳವನ್ನು ಕೂಡ ನಾವು ಕೊಡಬೇಕು. ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಅದೇ ಟೊಮ್ಯಾಟೊ ಪ್ರತಿ ಕಿಲೋಗೆ 100 ರೂಪಾಯಿಗೆ ಮಾರಾಟವಾಗುತ್ತದೆ. ಅಷ್ಟೂ ಟೊಮ್ಯಾಟೊವನ್ನು ಒಂದೇ ಸಲಕ್ಕೆ ಕೊಂಡುಕೊಳ್ಳುವುದರಿಂದ ನಾವು ಮಧ್ಯವರ್ತಿಗಳಿಗೆ ಟೊಮ್ಯಾಟೊ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಅವರು.
ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಸ್.ಬಿ.ದಿಡ್ಡಿಮಣಿ, ಪ್ರತಿ ವರ್ಷ ತರಕಾರಿ ಬೆಲೆ ಹೆಚ್ಚಾಗುತ್ತದೆ. ಆದರೆ ಈ ವರ್ಷ, ಮತ್ತಷ್ಟು ಏರಿಕೆಯಾಗಿದೆ. ಇನ್ನು 15 ದಿನಗಳಲ್ಲಿ ತರಕಾರಿ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ ಎನ್ನುತ್ತಾರೆ.
ಮಳೆ ಕೊರತೆ, ಬೀಜ ಬಿತ್ತನೆ ಕಡಿಮೆಯಾಗಿ ಉತ್ಪಾದನೆ ಕುಂಠಿತವಾಗಿರುವುದು ತರಕಾರಿಗಳ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.ಬೆಳಗಾವಿ, ಕೋಲಾರಗಳಿಂದ ಟೊಮ್ಯಾಟೊ ಮಾರುಕಟ್ಟೆಗೆ ಬರಲಾರಂಭಿಸಿದರೆ ಬೆಲೆ ಕಡಿಮೆಯಾಗಬಹುದು ಎನ್ನುತ್ತಾರೆ ಅವರು.  ಎಪಿಎಂಸಿ ಮಾರುಕಟ್ಟೆಯಲ್ಲಿರುವ ಮಧ್ಯವರ್ತಿಗಳು, ತರಕಾರಿ, ಧವಸ ಧಾನ್ಯಗಳು, ಅಕ್ಕಿ ಬೇಳೆಕಾಳುಗಳ ಬೆಲೆ ಹೆಚ್ಚಾದಾಗ ಜನರು ನಮ್ಮನ್ನು ದೂರುತ್ತಾರೆ. ಬೆಲೆ ಹೆಚ್ಚಾಗಲು ನಾವು ಕಾರಣ ಎನ್ನುತ್ತಾರೆ. ಅನೇಕ ಚಿಲ್ಲರೆ ಮಾರಾಟಗಾರರು ಕ್ರೆಡಿಟ್ ಮೇಲೆ ಉತ್ಪನ್ನಗಳನ್ನು ಖರೀದಿಸುತ್ತಾರೆ. ತರಕಾರಿಗಳನ್ನು ವಿತರಣೆ ಮಾಡಲು ನಾವು ಕಾರ್ಮಿಕರ ವೇತನವನ್ನು ನೀಡುತ್ತೇವೆ. ಬಾಸ್ಕೆಟ್ ವೊಂದಕ್ಕೆ ನಮಗೆ 50ರಿಂದ 60 ರೂಪಾಯಿ ಲಾಭ ಸಿಗುತ್ತದೆಯಷ್ಟೆ ಎನ್ನುತ್ತಾರೆ.
ಹಾಸನದ ಆಲೂಗಡ್ಡೆ ಬೆಳೆಗಾರರಲ್ಲಿ ಆತಂಕ: ಸತತ 5ನೇ ವರ್ಷವೂ ಬೆಳೆ ನಾಶವಾಗಿರುವುದರಿಂದ ಹಾಸನ ಜಿಲ್ಲೆಯ ಆಲೂಗಡ್ಡೆ ಬೆಳೆಗಾರರು ಆತಂಕಗೊಂಡಿದ್ದಾರೆ. ಇಲ್ಲಿ ಕಳೆದ 10 ವರ್ಷಗಳಲ್ಲಿ ಸಣ್ಣ ಮತ್ತು ಅತಿ ಸಣ್ಣ ಆಲೂಗಡ್ಡೆ ಬೆಳೆಯುವ ಪ್ರದೇಶ 61,000 ಹೆಕ್ಟೇರ್ ಪ್ರದೇಶದಿಂದ 10,087 ಹೆಕ್ಟೇರ್ ಪ್ರದೇಶಕ್ಕೆ ಕುಸಿದಿದೆ. ಆಲೂಗಡ್ಡೆ ಬೆಳೆಯುತ್ತಿದ್ದ ಸಣ್ಣ ರೈತರು ಈಗ ಮೆಕ್ಕೆಜೋಳ, ಶುಂಠಿ ಬೆಳೆಯಲು ಆರಂಭಿಸಿದ್ದಾರೆ. ಇನ್ನೊಂದೆಡೆ 5 ಎಕ್ರೆಗಿಂತ ಹೆಚ್ಚು ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯುತ್ತಿದ್ದವರು ತಮ್ಮ ಜಮೀನನ್ನು ಶುಂಠಿ ಬೆಳೆಗಾರರಿಗೆ ಭೋಗ್ಯಕ್ಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com