ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎನ್ ಧರಂ ಸಿಂಗ್ ಅವರು ಒಬ್ಬ ಅಜಾತಶತ್ರು. ಅವರ ನಿಧನದಿಂದ ರಾಜ್ಯ ಹಾಗೂ ಕಾಂಗ್ರೆಸ್ ಗೆ ಅಪಾರ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.
ಇಂದು ಹಾವೇರಿ ತಾಲ್ಲೂಕಿನ ದೇವಿಹೊಸೂರಿನಲ್ಲಿ ಸಿದ್ದರಾಮಯ್ಯ ಅವರು ಎರಡು ನಿಮಿಷ ಮೌನಾಚರಣೆ ಮಾಡುವ ಮೂಲಕ ಮಾಜಿ ಸಿಎಂ ಧರಂ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದರು.
ಬಳಿಕ ಮಾತನಾಡಿದ ಸಿಎಂ, ಧರ್ಮ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಅವರ ಸಂಪುಟದಲ್ಲಿ ನಾನು ಉಪ ಮುಖ್ಯಮಂತ್ರಿಯಾಗಿದ್ದೆ. ಅವರು ತುಂಬಾ ಸ್ನೇಹಜೀವಿ. ರಾಜ್ಯ ರಾಜಕಾರಣಕ್ಕೆ ಸುಮಾರು 5 ದಶಕಗಳ ಕಾಲ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಧರ್ಮಸಿಂಗ್ ಅವರ ನಿಧನದ ಹಿನ್ನಲೆಯಲ್ಲಿ ಹಾವೇರಿಯ ಕಾಗಿನೆಲೆಯಲ್ಲಿ ಆಯೋಜಿಸಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮುಖ್ಯಮಂತ್ರಿಯವರು ಬೆಂಗಳೂರಿಗೆ ವಾಪಸಾಗಿದ್ದಾರೆ.
ಇನ್ನು ಧರಂ ಸಿಂಗ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಅವರ ಸ್ನೇಹಿತ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜನ್ ಖರ್ಗೆ ಅವರು, ನಾನು ನನ್ನ ಆಪ್ತ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ನಾನು ಅವರು ಒಟ್ಟಿಗೆ 50 ವರ್ಷಗಳ ಕಾಲ ರಾಜಕೀಯ ಮಾಡಿದ್ದೇವೆ. ಅವರ ನಿಧನದಿಂದ ನನಗೆ ದೊಡ್ಡ ಆಘಾತವಾಗಿದೆ. ನನಗೆ ಏನು ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಧರಂ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಹಿರಿಯ ಮುಖಂಡರಾದ ವೀರಪ್ಪ ಮೊಯ್ಲಿ, ಜನಾರ್ದನ ಪೂಜಾರಿ, ಕಂದಾನ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.