ಮೆಗ್ಗಾನ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ: ಇಬ್ಬರು ನರ್ಸ್ ಸೇರಿ ಮೂವರ ಅಮಾನತು

ಶಿವಮೊಗ್ದದ ಮೆಗ್ಗಾನ್ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟ್ರೆಚರ್ ನೀಡದ ಹಿನ್ನೆಲೆಯಲ್ಲಿ ಅನಾರೋಗ್ಯ ಪೀಡಿತ ಪತಿಯನ್ನು ನೆಲದ ಮೇಲೆಯೇ...
ಪತಿಯನ್ನು ಎಳೆದೊಯ್ಯುತ್ತಿರುವ ದೃಶ್ಯ
ಪತಿಯನ್ನು ಎಳೆದೊಯ್ಯುತ್ತಿರುವ ದೃಶ್ಯ
ಶಿವಮೊಗ್ಗ: ಶಿವಮೊಗ್ದದ ಮೆಗ್ಗಾನ್ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟ್ರೆಚರ್ ನೀಡದ ಹಿನ್ನೆಲೆಯಲ್ಲಿ ಅನಾರೋಗ್ಯ ಪೀಡಿತ ಪತಿಯನ್ನು ನೆಲದ ಮೇಲೆಯೇ ಎಳೆದೊಯ್ದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಇಬ್ಬರು ನರ್ಸ್ ಗಳನ್ನು ಹಾಗೂ ಓರ್ವ ಡಿ ಗ್ರೂಪ್ ನೌಕರಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮೆಗ್ಗಾನ್ ಆಸ್ಪತ್ರೆಯ ನಿರ್ದೇಶಕ ಸುಶೀಲ್ ಕುಮಾರ್ ಅವರು, ಆಸ್ಪತ್ರೆಯ ಸಿಬ್ಬಂದಿಯ ಗಮನಕ್ಕೆ ತರದೆ ಫಾಮಿದಾ ಅವರು ತಮ್ಮ ಪತಿ ಅಮೀರ್ ಸಾಬ್ ನನ್ನು ಎಳೆದುಕೊಂಡು ಹೋಗಿದ್ದಾರೆ. ಆದಾಗ್ಯೂ ನಾವು ನಿರ್ಲಕ್ಷ್ಯ ವಹಿಸಿದ ಇಬ್ಬರು ನರ್ಸ್ ಗಳಾದ ಜ್ಯೋತಿ, ಚಿತ್ರಾ ಹಾಗೂ ಗ್ರೂಪ್ ಡಿ ಸುವರ್ಣಮ್ಮನನ್ನು ಅಮಾನತುಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ವರದಿ ನೀಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸುಶೀಲ್ ಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಮೀರ್ ಸಾಬ್ ಎಂಬುವರನ್ನು 9 ದಿನಗಳ ಹಿಂದೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಮೀರ್ ಎಕ್ಸ್ ರೇ ನಡೆಸಲು ವೈದ್ಯರು ಬರೆದಿದ್ದರು. ಅಂತೆ ಅಮೀರ್ ಪತ್ನಿ ಫಾಮಿದಾ ಅವರು ಎಕ್ಸ್ ರೇ ಮಾಡಿಸುವಲ್ಲಿ ಸಾಗಿಸಲು ಆಸ್ಪತ್ರೆ ಸಿಬ್ಬಂದಿಗಳ ನೆರವು ಕೇಳಿದಾಗ ಯಾರೊಬ್ಬರು ನೆರವು ನೀಡಲಿಲ್ಲ ಇದರಿಂದಾಗಿ ಅವರು ಪತಿಯನ್ನು ನೆಲದ ಮೇಲೆ ದರದರನೆ ಎಳೆದೊಯ್ದಿದ್ದಾರೆ. ಈ ದೃಶ್ಯವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. 
ಆಸ್ಪತ್ರೆಯ ಸಿಬ್ಬಂದಿಗಳು ಯಾವುದೇ ಕೆಲಸಕ್ಕೆ ಆಗಲಿ ದುಡ್ಡನ್ನು ಕೇಳುತ್ತಾರೆ. ಹಣ ಕೊಡದೆ ಇದ್ದಾಗ ಅವರು ನಮ್ಮ ನೆರವಿಗೆ ಬರುವುದಿಲ್ಲ ಎಂದು ಪತ್ನಿ ಫಾಮಿದಾ ಆರೋಪಿಸಿದ್ದಾರೆ.
ಈ ವಿಡಿಯೋ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರದ ವತಿಯಿಂದ ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಲಾಗಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com