ಬೆಂಗಳೂರು: ಹೆಚ್ಚುತ್ತಿರುವ ಆನೆಗಳ ಹಾವಳಿ ತಡೆಯಲು ರಾಜ್ಯ ಸರ್ಕಾರ 272 ಕೋಟಿ ರು ವೆಚ್ಚದಲ್ಲಿ ಆನೆ ಕಾರಿಡಾರ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ಹೆತ್ತೂರು ಹೋಬಳಿಯ 7 ಹಳ್ಳಿಗಳ ವ್ಯಾಪ್ತಿಯ 3,143 ಎಕರೆ ಭೂಮಿ ಸ್ವಾಧೀನ ಮಾಡಿಕೊಂಡು ಆನೆ ಕಾರಿಡಾರ್ ಮಾಡಲು ನಿರ್ಧರಿಸಲಾಗಿದೆ. ಆನೆಗಳು ಬಹುಕಾಲದಿಂದ ವಲಸೆ ಮಾರ್ಗವಾಗಿ ಬಳಸುವ ಕಾಡಿನ ಮಧ್ಯಭಾಗ ಹಾಗೂ ಹೊಂದಿಕೊಂಡಂತಿರುವ ಖಾಸಗಿ ಜಮೀನುಗಳನ್ನು ಖರೀದಿಸಿ ನಿರ್ಮಿಸಲು ನಿರ್ಧರಿಸಲಾಗಿದೆ.
ಹೊಸ ಭೂ ಸ್ವಾಧೀನ ಕಾಯಿದೆಯಂತೆ ಜಮೀನು ಸ್ವಾಧೀನ ಮಾಡಿಕೊಳ್ಳಬೇಕಿದ್ದು, ಈ ಉದ್ದೇಶಕ್ಕೆ ಅಗತ್ಯವಾದ 272 ಕೋಟಿ ರು. ಅನುದಾನವನ್ನು ಕಾಂಪಾ ನಿಧಿಯಿಂದ ಭರಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ ಎಂದು ವಿಧಾನಸಭೆಯಲ್ಲಿ ಅರಣ್ಯ ಸಚಿವ ರಮಾನಾಥ ರೈ ವಿವರಿಸಿದ್ದಾರೆ.
ಸಕಲೇಶಪುರ ತಾಲೂಕಿನ ಹೂಂಕರವಳ್ಳಿಯಲ್ಲಿ ಜೂನ್- 3ರಂದು ರೈತನೊಬ್ಬ ಆನೆ ದಾಳಿಯಲ್ಲಿ ಮೃತಪಟ್ಟ ಪ್ರಕರಣದ ಬಗ್ಗೆ ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಯಿತು.