ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕರ್ನಾಟಕ: ಈ ವರ್ಷ ಎಂಜಿನಿಯರಿಂಗ್ ಕೋರ್ಸ್ ಗಳ ಶುಲ್ಕ ಹೆಚ್ಚಳವಿಲ್ಲ

ಎಂಜಿನಿಯರಿಂಗ್ ಪದವಿ ಆಕಾಂಕ್ಷಿಗಳಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ. 2017-18ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶುಲ್ಕ...
Published on
ಬೆಂಗಳೂರು: ಎಂಜಿನಿಯರಿಂಗ್ ಪದವಿ ಆಕಾಂಕ್ಷಿಗಳಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ. 2017-18ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಏರಿಕೆಯಿಲ್ಲ.
ಈ ಕುರಿತ ಅಧಿಕೃತ ಒಮ್ಮತದ ಒಪ್ಪಂದ  ರಾಜ್ಯ ಸರ್ಕಾರ ಮತ್ತು ಖಾಸಗಿ ಎಂಜಿನಿಯರಿಂಗ್ ಕಾಲೇಜು ವ್ಯವಸ್ಥಾಪಕ ಮಂಡಳಿ ಮಧ್ಯೆ ಏರ್ಪಟ್ಟಿದೆ.
ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪ್ರಕಾರ,  ಖಾಸಗಿ ಕಾಲೇಜು ವ್ಯವಸ್ಥಾಪಕ ಮಂಡಳಿ ಶೇಕಡಾ 10ರಷ್ಟು ಏರಿಕೆ ಮಾಡುವ ಯೋಜನೆಯಲ್ಲಿದ್ದರೂ ಕೂಡ ಈ ವರ್ಷ ಬರಗಾಲವಾಗಿ ಜನರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲದಿರುವುದರಿಂದ ಶುಲ್ಕ ಹೆಚ್ಚಳ ಮಾಡದಂತೆ ರಾಜ್ಯ ಸರ್ಕಾರ ಮನವರಿಕೆ ಮಾಡಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜತೆ ಮಾತನಾಡಿದ ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘ(ಕುಪೆಕಾ)ದ ಕಾರ್ಯದರ್ಶಿ ಡಾ.ಎಂ.ಕೆ.ಪಾಂಡುರಂಗ ಶೆಟ್ಟಿ, ಆರಂಭದಲ್ಲಿ ನಾವು ಶೇಕಡಾ 20ರಷ್ಟು ಶುಲ್ಕ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದೆವು. ಕೊನೆಗೆ ಶೇಕಡಾ 10ರಷ್ಟಾದರೂ ಶುಲ್ಕ ಹೆಚ್ಚಳಕ್ಕೆ  ಬೇಡಿಕೆ ಮುಂದಿಟ್ಟೆವು. ಆದರೆ ಈ ವರ್ಷ ಬರಗಾಲವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದಾಗ ಕಳೆದ ವರ್ಷದ ಶುಲ್ಕವನ್ನೇ ಮುಂದುವರಿಸಲು ನಿರ್ಧರಿಸಿದೆವು ಎನ್ನುತ್ತಾರೆ.
ಸೀಟು ಹಂಚಿಕೆಯಲ್ಲಿ ಕೂಡ ಯಾವುದೇ ಬದಲಾವಣೆಯಾಗಿಲ್ಲ. ಸರ್ಕಾರಿ ಕೋಟಾ ಸೀಟುಗಳ ಶುಲ್ಕ 49,500ರಿಂದ 55,000 ದ ಒಳಗಿದ್ದು, ಕಾಮೆಡ್ ಕೆ ಸೀಟುಗಳಿಗೆ 1.21 ಲಕ್ಷದಿಂದ 1.7 ಲಕ್ಷದವರೆಗೆ ಆಗುತ್ತದೆ. ಅಂದರೆ ಸಿಇಟಿ ವಿದ್ಯಾರ್ಥಿಗಳಿಂದ ಪಡೆದ ಕಡಿಮೆ ಶುಲ್ಕದ ಮೊತ್ತವನ್ನು ಕಾಮೆಡ್ ಕೆ ಸೀಟುಗಳ ಶುಲ್ಕದಿಂದ ಸಮತೂಗಿಸಬಹುದು.
2016-17ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೂಡ ಎಂಜಿನಿಯರಿಂಗ್ ಕೋರ್ಸ್ ಗಳ ಶುಲ್ಕ ಶೇಕಡಾ 10ರಷ್ಟು ಹೆಚ್ಚಾಗಿತ್ತು.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಶುಲ್ಕ ಇನ್ನೂ ನಿಗದಿಯಾಗಿಲ್ಲ ಎಂದು ರಾಜ್ಯ ವೈದ್ಯ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. ಶುಲ್ಕ ಹೆಚ್ಚಳ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಇದು ವಿಧಾನ ಸಭೆ ಚುನಾವಣೆಯ ವರ್ಷವಾಗಿರುವುದರಿಂದ ಮತ್ತು ರಾಜ್ಯದಾದ್ಯಂತ ತೀವ್ರ ಬರಗಾಲವಿದೆ. ಶುಲ್ಕ ಹೆಚ್ಚಳ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಉನ್ನತ ಮಟ್ಟದಲ್ಲಿ ಚರ್ಚೆಯಾಗಿದೆ ಎನ್ನುತ್ತವೆ ಮೂಲಗಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com