ಕರ್ನಾಟಕ ಬಂದ್ ಬಹುತೇಕ ವಿಫಲ, ಜನಜೀವನ ಯಥಾಸ್ಥಿತಿ

ಬಯಲು ಸೀಮೆಗೆ ಶಾಶ್ವತ ನೀರಾವರಿ, ಮಹದಾಯಿ-ಕಳಸಾ ಬಂಡೂರಿ ಯೋಜನೆಯ ತ್ವರಿತ ಜಾರಿ, ಮೇಕೆದಾಟು ಯೋಜನೆ ಜಾರಿ,....
ಕನ್ನಡ ಪರ ಹೋರಾಟಗಾರ
ಕನ್ನಡ ಪರ ಹೋರಾಟಗಾರ
Updated on
ಬೆಂಗಳೂರು: ಬಯಲು ಸೀಮೆಗೆ ಶಾಶ್ವತ ನೀರಾವರಿ, ಮಹದಾಯಿ-ಕಳಸಾ ಬಂಡೂರಿ ಯೋಜನೆಯ ತ್ವರಿತ ಜಾರಿ, ಮೇಕೆದಾಟು ಯೋಜನೆ ಜಾರಿ, ರೈತರ ಸಾಲ ಮನ್ನಾ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ  ಒತ್ತಾಯಿಸಿ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್ ಬಹುತೇಕ ವಿಫಲವಾಗಿದ್ದು, ನವಲಗುಂದ ಹಾಗೂ ನರಗುಂದ ಹೊರತುಪಡಿಸಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಜನಜೀವನ ಮತ್ತು ವಾಹನ ಸಂಚಾರ ಯಥಾ ಸ್ಥಿತಿಯಲ್ಲಿತ್ತು.
ಕೋಲಾರದ ಮುಳಬಾಗಿಲು ಪಟ್ಟಣದಲ್ಲಿ ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದರಿಂದ ಹಾಗೂ ಹೆದ್ದಾರಿ ಬಂದ್ ಮಾಡಿ ಟೈರ್ ಗೆ ಬೆಂಕಿ ಇಟ್ಟಿದ್ದರಿಂದ ಈ ಭಾಗದಲ್ಲಿ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ಥವಾಗಿತ್ತು. ಇನ್ನು ತುಮಕೂರು ಹಾಗೂ ರಾಮನಗರದ ಕೆಲವು ಕಡೆಗಳಲ್ಲಿ ಬಲವಂತದಿಂದ ಅಂಗಡಿಗಳನ್ನು ಮುಚ್ಚಿಸಿರುವುದು,ರಸ್ತೆ ತಡೆ ಮಾಡಿ, ಟಯರ್‌ಗೆ ಬೆಂಕಿ ಹಚ್ಚಿದ್ದರೆ ಕೆಲವು ಕಡೆ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ ಸಣ್ಣಪುಟ್ಟ ಘಟನೆಗಳ ಹೊರತು ಪಡಿಸಿದರೆ ಬಂದ್ ಬಹುತೇಕ ಶಾಂತಿಯುತವಾಗಿತ್ತು.
ಬಂದ್ ಕರೆ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದರೆ ಬಸ್ ಆಟೋ ಇನ್ನಿತರ ವಾಹನಗಳ ಸಂಚಾರ ಎಂದಿನಂತಿತ್ತು ಬಯಲುಸೀಮೆ  ಪ್ರದೇಶಗಲ್ಲಿ ಮಂಜಾಗೃತ ಕ್ರಮವಾಗಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿತ್ತು.
ಇನ್ನು ರಾಜಧಾನಿ ಬೆಂಗಳೂರಿನಲ್ಲೂ ಜನಜೀವನ ಎಂದಿನಂತಿದ್ದರೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಸಂಚಾರ ಮಾಮೂಲಿನಂತಿತ್ತು.
ಕನ್ನಡ ಒಕ್ಕೂಟದ ಬಂದ್ ಗೆ ಪೊಲೀಸರು ಅನುಮತಿ ನಿರಾಕರಿಸಿದ್ದರೂ ಪುರಭವನದಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಪ್ರತಿಭಟನೆ ನಡೆಸಲು ಮುಂದಾದ ವಾಟಾಳ್ ನಾಗರಾಜ್ ಹಾಗೂ ಇತರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. 
ಉತ್ತರ ಕರ್ನಾಟಕದಲ್ಲೂ ಮಿಶ್ರ ಪ್ರತಿಕ್ರಿಯೆ
ಕರ್ನಾಟಕ ಬಂದ್ ಉತ್ತರ ಕರ್ನಾಟಕದಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಧಾರವಾಡ, ಗದಗ, ಬೆಳಗಾವಿ, ಬಾಗಲಕೋಟ, ಹಾವೇರಿ ಜಿಲ್ಲೆಗಳ ಪ್ರಮುಖ ನಗರಗಳಲ್ಲಿ ಮುಂಜಾನೆ ಕೆಲ ಹೊತ್ತು ಅಂಗಡಿ ಮುಂಗಟ್ಟುಗಳು, ಹೊಟೇಲ್‌ಗಳು ಮುಚ್ಚಿದ್ದವಾದರೂ ನಂತರ ನಿಧಾನವಾಗಿ ಅಲ್ಲಲ್ಲಿ ಬಾಗಿಲು ತೆರೆದು ಯಥಾಪ್ರಕಾರ ವಹಿವಾಟು ನಡೆಸಿದವು.
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮುಂಜಾಗ್ರತೆ ಕ್ರಮವಾಗಿ ಮುಂಜಾನೆಯಿಂದಲೇ ನಗರ ಸಾರಿಗೆ ಹಾಗೂ ಪರಊರುಗಳಿಗೆ ತೆರಳುವ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಬಸ್ ನಿಲ್ದಾಣಗಳಲ್ಲಿ ಕಾಯ್ದು ನಿಂತಿದ್ದ ಪ್ರಯಾಣಿಕರು ಪರದಾಡುವ ಸ್ಥಿತಿ ಕಂಡುಬರುತ್ತಿತ್ತು.
ಅವಳಿ ನಗರದ ಶಾಲಾ ಕಾಲೇಜುಗಳಿಗೆ ಬಂದ್‌ನ ಬಿಸಿ ತಟ್ಟದೆ ಎಂದಿನಂತೆ ಆರಂಭವಾಗಿದ್ದವು. ಆದರೆ ಬಸ್ ಹಾಗೂ ಆಟೋಗಳಲ್ಲದೇ ವಿದ್ಯಾರ್ಥಿಗಳು ಸಾಕಷ್ಟು ಕಡೆಗಳಲ್ಲಿ ನಡೆದೇ ಹೋಗುತ್ತಿದ್ದುದು ಕಂಡುಬಂದಿತು. ಬಂದ್‌ಗೆ ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ದೊರಕಿದ್ದು ಬಸ್‌ಗಳು, ಆಟೋಗಳು ಹಾಗೂ ಖಾಸಗಿ ಬಸ್‌ಗಳ ಸಂಚಾರ ಎಂದಿನಂತೆಯೇ ನಡೆದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com