ಕೋಲಾರ: ಕಳೆದ ಎರಡು ವರ್ಷಗಳಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದು ಕಟ್ಟು ಕೊತ್ತಂಬರಿ ಸೊಪ್ಪು 90 ರಿಂದ 100 ರು ಗೆ ಮಾರಾಟವಾಗುತ್ತಿದೆ.
ಸಾಮಾನ್ಯವಾಗಿ ಸಣ್ಣ ರೈತರು 4ರಿಂದ 10 ಗುಂಟೆ ಜಮೀನಿನಲ್ಲಿ ಕೊತ್ತಂಬರಿ ಸೊಪ್ಪು ಬೆಳೆಯುತ್ತಾರೆ. ಬೆಳೆದ ಪ್ರತಿ ಕಟ್ಟು ಸೊಪ್ಪಿನ ಬೆಲೆ 4 ರಿಂದ 20 ರು ಇರುತ್ತದೆ. ಹೈಬ್ರಿಡ್ ಸೊಪ್ಪು 45ರಿಂದ 50 ದಿನಗಳಲ್ಲಿ ಬೆಳೆಯುತ್ತದೆ ಆದರೆ ನಾಟಿ ಅಂದರೇ ದೇಶಿಯ ತಳಿ ಕೊತ್ತಂಬರಿ ಸೊಪ್ಪು ಬೆಳೆಯಲು 50ರಿಂದ 60 ದಿವಸಗಳು ಬೇಕಾಗುತ್ತದೆ. ಹೀಗಾಗ್ಯೂ ನಾಟಿ ಕೊತ್ತಂಬರಿ ಸೊಪ್ಪಿಗೆ ಅತಿ ಬೇಡಿಕೆಯಿದೆ ಎಂದು ಕೋಲಾರ ತೋಟಗಾರಿಕೆ ಇಲಾಖೆ ಡೆಪ್ಯೂಟಿ ಡೈರೆಕ್ಟರ್ ಎಂ.ಎಸ್ ರಾಜು ಹೇಳಿದ್ದಾರೆ.
ಸತತವಾಗಿ ಮಳೆ ಬೀಳುತ್ತಿರುವ ಕಾರಣ ಕಳೆದ ಎರಡು ವಾರಗಳಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಗಗನಕ್ಕೇರಿದೆ. ಸೊಪ್ಪಿನ ಬೇರು ಸಣ್ಣದಿರುವ ಕಾರಣ ಗಾಳಿ ಮತ್ತು ಹೆಚ್ಚಿನ ಮಳೆಗೆ ಕೊಚ್ಚಿಕೊಂಡು ಹೋಗುತ್ತಿದೆ.
ತಮ್ಮ 4 ಗುಂಟೆ ಜಮೀನಿನಲ್ಲಿ ಇತರ ಬೆಳೆಗಳ ಜೊತೆ ಕೊತ್ತಂಬರಿ ಸೊಪ್ಪು ಬೆಳೆಯುತ್ತಿದ್ದೆ. ಈ ಬಾರಿಯೂ ಹಾಗೆಯೇ ಕೊತ್ತಂಬರಿ ಸೊಪ್ಪು ಬಿತ್ತಿದ್ದೆ, ಆದರೆ ಪೂರ್ವ ಮುಂಗಾರು ಮಳೆಯಿಂದಾಗಿ ಅರ್ಧಕ್ಕರ್ಧ ಬೆಳೆ ನಾಶವಾಗಿದೆ ಎಂದು ಮಾಲೂರಿನ ವೊಕ್ಲೇರಿ ಗ್ರಾಮದ ರೈತ ಚಂದ್ರಪ್ಪ ಹೇಳಿದ್ದಾರೆ.
ಬೆಲೆ ಏರಿಕೆಯಿಂದಾಗಿ ಸಣ್ಣ ರೈತರು ಹೆಚ್ಚಾಗಿ ಕೊತ್ತಂಬರಿ ಸೊಪ್ಪು ಬೆಳೆಯಲು ಮುಂದಾಗಿದ್ದಾರೆ. ಹೀಗಾಗಿ ಶೀಘ್ರವೇ ಸೊಪ್ಪಿನ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ಉಪ ನಿರ್ದೇಶಕ ರಾಜು ಅಭಿಪ್ರಾಯ ಪಟ್ಟಿದ್ದಾರೆ.
ತಮ್ಮ 6 ಗುಂಟೆ ಜಮೀನಿನಲ್ಲಿ ಕೊತ್ತಂಬರಿ ಸೊಪ್ಪು ಬೆಳೆದಿರುವ ರಾಮಚಂದ್ರಪ್ಪ ತಾವು ಕೃಷಿಗಾಗಿ ಖರ್ಚು ಮಾಡಿರುವ 4 ಪ್ರಮಾಣದಷ್ಟು ಹೆಚ್ಚು ಲಾಭ ಗಳಿಸಿರುವುದಾಗಿ ಹೇಳಿದ್ದಾರೆ.
ಕೊತ್ತಂಬರಿ ಸೊಪ್ಪು ಹೊರ ರಾಜ್ಯಗಳಿಂದ ರಾಜ್ಯಕ್ಕೆ ಪೂರೈಕೆಯಾಗುವುದಿಲ್ಲ. ಕೋಲಾರ ಜಿಲ್ಲೆಯೊಂದರಿಂದಲೇ ಕೊತ್ತಂಬರಿ ಸೊಪ್ಪು ಪೂರೈಕೆಯಾಗುತ್ತದೆ. ಸದ್ಯ ಸೊಪ್ಪಿಗೆ ಭಾರೀ ಬೇಡಿಕೆ ಇರುವುದರಿಂದ ಕೋಲಾರದಿಂದ ತಮಿಳುನಾಡು ಮತ್ತು ಆಂಧ್ರ ಪ್ರದೇಶಕ್ಕೆ ಕೊತ್ತಂಬರಿ ಸೊಪ್ಪನ್ನು ಸಾಗಾಟ ಮಾಡಲಾಗುತ್ತಿಲ್ಲೆ ಎಂದು ಎಪಿಎಂಸಿ ವ್ಯಾಪಾರಿಗಳು ತಿಳಿಸಿದ್ದಾರೆ.