ಸಚಿವ ಸಂತೋಷ್ ಲಾಡ್ ಗೆ 5 ತಿಂಗಳು ಜೈಲು ಶಿಕ್ಷೆ: 7.5 ಕೋಟಿ ರು ದಂಡ

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ದಾಖಲಿಸಿದ್ದ ಚೆಕ್‌ ಬೌನ್ಸ್‌ ಪ್ರಕರಣ ಸಂಬಂಧ ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಅವರಿಗೆ 5 ತಿಂಗಳ ಸಾಧಾರಣ ...
ಸಂತೋಷ್ ಲಾಡ್
ಸಂತೋಷ್ ಲಾಡ್
ಬೆಂಗಳೂರು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ದಾಖಲಿಸಿದ್ದ ಚೆಕ್‌ ಬೌನ್ಸ್‌ ಪ್ರಕರಣ ಸಂಬಂಧ ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಅವರಿಗೆ 5 ತಿಂಗಳ ಸಾಧಾರಣ ಜೈಲು ಶಿಕ್ಷೆ ವಿಧಿಸಿ ನಗರದ 42ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ರಾಕ್‌ಲೈನ್‌ ಎಂಟರ್‌ಟೈನ್‌ಮೆಂಟ್‌’ ಪರವಾಗಿ ಸಿನಿಮಾ ನಿರ್ಮಾಪಕ ರಾಕ್‌ ಲೈನ್‌ ವೆಂಕಟೇಶ್‌ ದಾಖಲಿಸಿದ್ದ ಖಾಸಗಿ ಮೊಕದ್ದಮೆಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಅನ್ನುಗೌಡ ಪಾಟೀಲ, ಶಿಕ್ಷೆಯ ಜೊತೆಗೆ ರು. 7.25 ಕೋಟಿ ದಂಡ ಪಾವತಿ ಮಾಡಬೇಕು. ಪಾವತಿಸದಿದ್ದರೆ ಪ್ರತ್ಯೇಕವಾಗಿ ಆರು ತಿಂಗಳು ಸಾಧಾರಣ ಜೈಲು ಶಿಕ್ಷೆ ಅನುಭವಿಸಬೇಕು’ ಎಂದು  ಆದೇಶದಲ್ಲಿ ತಿಳಿಸಿದ್ದಾರೆ.
ರಾಕ್‌ಲೈನ್‌ ವೆಂಕಟೇಶ್‌ ಹಾಗೂ ಸಂತೋಷ್‌ ಲಾಡ್‌ ಹಲವು ವರ್ಷಗಳಿಂದ ಸ್ನೇಹಿತರು.
ದೆಹಲಿ ಬಿಲ್ಡರೊಬ್ಬರು ನ್ಯಾಯಾಲಯದಲ್ಲಿ ದಾಖಲಿಸಿದ್ದ ಪ್ರಕರಣದಲ್ಲಿ ಹಣ ಪಾವತಿ ಮಾಡಲು ಆರ್ಥಿಕ ತೊಂದರೆ ಇದೆ  ಎಂದು ಹೇಳಿದ್ದ ಲಾಡ್‌, ವೆಂಕಟೇಶ್‌ ಅವರ ಬಳಿ 2014ರಲ್ಲಿ 6.20 ಕೋಟಿ ಪಡೆದಿದ್ದರು. ಈ ಹಣವನ್ನು ವೆಂಕಟೇಶ್‌, ರಾಕ್‌ಲೈನ್‌ ಎಂಟರ್‌ಟೈನ್‌ಮೆಂಟ್‌’  ಕಂಪೆನಿಯ ಮೂಲಕ ಶೀತಲ್‌ ಡೆವಲಪರ್ಸ್‌ ಕಂಪೆನಿಯ ಹೆಸರಿಗೆ ಡಿ.ಡಿ ತೆಗೆಸಿ ಕೊಟ್ಟಿದ್ದರು.
ಈ ವೇಳೆ ಚೆಕ್‌ ನೀಡಿದ್ದ ಲಾಡ್‌, ಐದೂವರೆ ತಿಂಗಳ ನಂತರ ಹಣ ವಾಪಸ್‌ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ನಿಗದಿತ ಸಮಯ ಮುಗಿದ ಬಳಿಕ ಚೆಕ್‌ ಅನ್ನು ಬ್ಯಾಂಕ್‌ಗೆ ಹಾಕಿದಾಗ ಬೌನ್ಸ್‌ ಆಗಿತ್ತು.
ಇದಾದ ನಂತರ ಹಣ ವಾಪಸ್‌ ಕೊಡುವಂತೆ ವೆಂಕಟೇಶ್‌ ಅವರು ಹಲವು ಬಾರಿ ಕೇಳಿದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ 2015ರಲ್ಲಿ ಲಾಡ್‌ ವಿರುದ್ಧ ಖಾಸಗಿ ಮೊಕದ್ದಮೆ ಹೂಡಿದ್ದರು.
ಸೋಮವಾರ ಬೆಳಿಗ್ಗೆ ಪ್ರಕರಣದ ಆದೇಶ ಹೊರಬಿದ್ದರೂ ಲಾಡ್‌ ನ್ಯಾಯಾಲಯದಲ್ಲಿ ಹಾಜರಿರಲಿಲ್ಲ. ಆಗ ನ್ಯಾಯಾಧೀಶರು, ಮಧ್ಯಾಹ್ನ 3 ಗಂಟೆಯೊಳಗಾಗಿ  (ಲಾಡ್‌) ನ್ಯಾಯಾಲಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಅವರು ಇರುವ ಸ್ಥಳದಲ್ಲೇ ಬಂಧಿಸಲು ಸೂಚನೆ ನೀಡುವುದಾಗಿ ಹೇಳಿದ್ದರು.
ಈ ಮಾಹಿತಿ ತಿಳಿದ ಲಾಡ್‌ ಮಧ್ಯಾಹ್ನ 3 ಗಂಟೆಗೆ ನ್ಯಾಯಾಲಯಕ್ಕೆ ಹಾಜರಾಗಿ, ‘ಪ್ರಕರಣ ಸಂಬಂಧ ಮೇಲ್ಮನವಿ ಸಲ್ಲಿಸುತ್ತೇನೆ. ಅದಕ್ಕೆ ಕಾಲಾವಕಾಶ ನೀಡಬೇಕು’ ಎಂದು ಕೋರಿದರು. ಅದನ್ನು ಮನ್ನಿಸಿದ ನ್ಯಾಯಾಲಯವು  ಶಿಕ್ಷೆಯನ್ನು ಒಂದು ತಿಂಗಳು ಅಮಾನತ್ತಿನಲ್ಲಿಟ್ಟು ಜಾಮೀನು ಮಂಜೂರು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com