ಬೆಂಗಳೂರು: ಜಂತಕಲ್ ಮೈನಿಂಗ್ ಪ್ರಕರಣ ಸಂಬಂಧ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ. ಕುಮಾರಸ್ವಾಮಿ ಅವರಿಗೆ ಹೈಕೋರ್ಟ್ ಮತ್ತೆ ತಾತ್ಕಾಲಿಕ ರಿಲೀಫ್ ನೀಡಿದ್ದು, ಜೂನ್ 28ರವರೆಗೆ ಅವರನ್ನು ಬಂಧಿಸದಂತೆ ಎಸ್ ಐಟಿಗೆ ಮಂಗಳವಾರ ಆದೇಶಿಸಿದೆ.
ನಿರೀಕ್ಷಣಾ ಜಾಮೀನು ಕೋರಿ ಎಚ್ ಡಿ ಕುಮಾರಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಜೂನ್ 28ರವರೆಗೆ ಕುಮಾರಸ್ವಾಮಿ ಅವರನ್ನು ಬಂಧಿಸದಂತೆ ಎಸ್ಐಟಿಗೆ ಆದೇಶ ನೀಡಿದೆ. ಅಲ್ಲದೆ ಎಸ್ ಐಟಿ ತನಿಖೆಗೆ ಸಹಕರಿಸುವಂತೆ ಮಾಜಿ ಸಿಎಂಗೆ ಸೂಚಿಸಿದೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಎಸ್ ಐಟಿ ಪರ ವಕೀಲರು, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೂರನೇ ಆರೋಪಿಯಾದ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ ಎಂದರು. ಆದರೆ ಎಸ್ಐಟಿ ವಾದ ತಳ್ಳಿಹಾಕಿದ ಕೋರ್ಟ್ ವಿಚಾರಣೆಯನ್ನು ಮುಂದಿನ ಮಂಗಳವಾರಕ್ಕೆ ಮುಂದೂಡಿದೆ.
ಜಂತಕಲ್ ಮೈನಿಂಗ್ ಗುತ್ತಿಗೆ ನವೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಎಸ್ಐಟಿ ವಿಶೇಷ ನ್ಯಾಯಾಲಯ ಕುಮಾರಸ್ವಾಮಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಅಲ್ಲದೇ 150 ಕೋಟಿ ರು. ಗಣಿ ಲಂಚ ಸ್ವೀಕರಿಸಿರುವುದಾಗಿ ಆರೋಪಿಸಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಎಸ್ಐಟಿಗೆ ಸಾಕ್ಷ್ಯಾಧಾರಗಳನ್ನು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ ಕಳೆದ ವಾರ ಹೈಕೋರ್ಟ್ ಜೂನ್ 20ರವರೆಗೆ ಬಂಧಿಸದಂತೆ ಮಧ್ಯಂತ ಆದೇಶ ನೀಡಿತ್ತು.