ಬೆಂಗಳೂರು: ಮ್ಯಾನ್ ಹೋಲ್ ಸ್ವಚ್ಛಗೊಳಿಸುತ್ತಿದ್ದ ಮೂವರು ಕಾರ್ಮಿಕರ ದಾರುಣ ಸಾವು

ಸಿ.ವಿ.ರಾಮನ್‌ನಗರದ ಕಗ್ಗದಾಸಪುರ ಮುಖ್ಯರಸ್ತೆಯಲ್ಲಿರುವ ಮ್ಯಾನ್‌ಹೋಲ್‌ಗೆ ಸೋಮವಾರ ರಾತ್ರಿ ದುರಸ್ಥಿಗಾಗಿ ಇಳಿದಿದ್ದ ಮೂವರು ಕಾರ್ಮಿಕರು ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಿ.ವಿ.ರಾಮನ್‌ನಗರದ ಕಗ್ಗದಾಸಪುರ ಮುಖ್ಯರಸ್ತೆಯಲ್ಲಿರುವ ಮ್ಯಾನ್‌ಹೋಲ್‌ಗೆ ಸೋಮವಾರ ರಾತ್ರಿ ದುರಸ್ಥಿಗಾಗಿ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಮ್ಯಾನ್‌ಹೋಲ್‌ನಲ್ಲಿ ಬಿದ್ದು ಮೃತಪಟ್ಟವರು ಮೂವರು ಆಂಧ್ರ ಮೂಲದವರು ಎಂದು ತಿಳಿದು ಬಂದಿದೆ. ಕೆಲವು ತಿಂಗಳ ಹಿಂದೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು. ಮೃತರನ್ನು ವೀರಯ್ಯ, ಆಂಜನೇಯ ರೆಡ್ಡಿ, ತಾವತ್ತಿನಾಯ್ಡು ಎಂದು ಗುರುತಿಸಲಾಗಿದೆ.

ನೀರಿನ ಸೋರಿಕೆ ತಡೆಯಲು ರಾತ್ರಿ 11 ಗಂಟೆ ನಂತರ ಕಾರ್ಮಿಕರು ಮ್ಯಾನ್‌ಹೋಲ್‌ಗೆ ಇಳಿದಿದ್ದರು. 12.30ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್‌ನಲ್ಲಿ ಬಂದಿದ್ದ ಕಾರ್ಮಿಕರ ಪೈಕಿ ಇಬ್ಬರು ಮ್ಯಾನ್‌ಹೋಲ್‌ಗೆ ಇಳಿದು ದುರಸ್ಥಿ ಕಾರ್ಯದಲ್ಲಿ ತೊಡಗಿದ್ದರು, ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಮೇಲೆ ಎತ್ತುವಂತೆ ಕೂಗಿದ್ದರು. ಇವರ ಚೀರಾಟ ಕೇಳಿ ಟ್ರ್ಯಾಕ್ಟರ್‌ ಚಾಲಕ ಸಹ ಮ್ಯಾನ್‌ಹೋಲ್‌ಗೆ ಇಳಿದಿದ್ದ. ಮೂವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಗುತ್ತಿಗೆದಾರ ಯಾವುದೇ ಭದ್ರತಾ ಕ್ರಮಗಳನ್ನು ಕೈಗೊಳ್ಳದೇ ಕಾರ್ಮಿಕರನ್ನು ಮ್ಯಾನ್ ಹೋಲ್‌ ಒಳಗೆ ಇಳಿಸಿದ್ದಾರೆ. ಗುತ್ತಿಗೆದಾರನ ನಿಲರ್ಕ್ಷ್ಯದಿಂದ ಪ್ರಾಣಹಾನಿ ಸಂಭವಿಸಿದೆ ಎಂದು ಮೃತ ಕಾರ್ಮಿಕರ ಕುಟುಂಬದವರು ಆರೋಪಿಸಿದ್ದಾರೆ.

ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com