
ಬೆಂಗಳೂರು: ರಾಜ್ಯದ ವಿವಿಧ ಅರಣ್ಯಗಳಿಗೆ ಬೆಂಕಿ ಬಿದ್ದು ನೂರಾರು ಎಕರೆ ಕಾಡು ನಾಶವಾಗಿರುವುದಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶಿದ್ದಾರೆ.
ಕಾಳ್ಗಿಚ್ಚು ಮತ್ತು ವನ್ಯಜೀವಿಗಳಿಗೆ ಕುಡಿಯುವ ನೀರಿಗೆ ಎದುರಾಗಿರುವ ಸಮಸ್ಯೆ ಕುರಿತು ಅರಣ್ಯ ಅಧಿಕಾರಿಗಳ ಜೊತೆ ಸೋಮವಾರ ಅರಣ್ಯ ಸಚಿವ ರಮಾನಾಥ ರೈ ಮತ್ತು ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ, ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯ, ಕಪ್ಪತಗುಡ್ಡ ಕಾಡಿನಲ್ಲಿ ಕಾಡ್ಗಿಚ್ಚು ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿದ್ದಾರೆ.
ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಇಲಾಖೆಯ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ರಮಾನಾಥ ರೈ ಅವರಿಗೆ ಸೂಚನೆ ನೀಡಿದರು.ಕಳೆದ ಒಂದು ವರ್ಷದ ಅವಧಿಯಲ್ಲಿ ಯಾವ ಅಧಿಕಾರಿ ಎಷ್ಟು ಬಾರಿ ಕಾಡಿಗೆ ಹೋಗಿದ್ದಾರೆ ಎಂಬುದೂ ಸೇರಿದಂತೆ ಕರ್ತವ್ಯ ನಿರ್ವಹಣೆ ಕುರಿತು ವರದಿ ನೀಡಿ ಎಂದೂ ಸೂಚಿಸಿದ್ದಾರೆ.
ಕಾಳ್ಗಿಚ್ಚು ಸಂಭವಿಸಿದಾಗ ನಿಯಂತ್ರಿಸಲು ಮತ್ತು ಅರಣ್ಯಕ್ಕೆ ಬೆಂಕಿ ಬೀಳುವುದನ್ನು ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ ಮುಖ್ಯಮಂತ್ರಿ, ಮಳೆಗಾಲ ಆರಂಭವಾಗಲು ಇನ್ನೂ ಎರಡು ತಿಂಗಳು ಇದೆ. ಅಲ್ಲಿಯವರೆಗೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಬೆಂಕಿ ಕಾಣಿಸಿಕೊಂಡ ತಕ್ಷಣ ಅದನ್ನು ನಂದಿಸಲು ಅನುಕೂಲವಾಗುವಂತೆ ಕಾಡಂಚಿನಲ್ಲಿ ಆಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಬೇಕು. ಇದಕ್ಕೆ ಸರ್ಕಾರ ಅಗತ್ಯ ನೆರವು ಒದಗಿಸಲಿದೆ. ಬೆಂಕಿ ಆರಿಸಲು ಸಿಬ್ಬಂದಿಗೆ ಮತ್ತು ಸ್ಥಳೀಯರಿಗೆ ಹೆಚ್ಚಿನ ತರಬೇತಿ ನೀಡಬೇಕು ಎಂದೂ ಸೂಚಿಸಿದರು.
ರಾಷ್ಟ್ರೀಯ ಅಭಯಾರಣ್ಯಗಳಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಕೊಳವೆ ಬಾವಿ ಕೊರೆಯಿಸಿ ಅದರಿಂದ ಕೆರೆಗಳನ್ನು ತುಂಬಿಸಬೇಕು ಮತ್ತು ಅಲ್ಲಲ್ಲಿ ಚೆಕ್ ಡ್ಯಾಂ ನಿರ್ಮಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ಮಳೆ ಪ್ರಮಾಣ ಕುಸಿದಿದೆ. ಅರಣ್ಯ ಪ್ರದೇಶದಲ್ಲಿ ತೇವಾಂಶ ಕೊರತೆಯಿಂದ ಹುಲ್ಲು ಮತ್ತು ಗಿಡಗಂಟಿಗಳು ಒಣಗಿವೆ. ಈ ಹಿಂದಿನ ಬೇಸಿಗೆಗೆ ಹೋಲಿಸಿದರೆ, ಈ ಬಾರಿ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವುದು ಸವಾಲಿನ ಕೆಲಸ ಎಂದು ಅಧಿಕಾರಿಗಳು ವಿವರಿಸಿದರು.
ಕೆಲವು ಭಾಗಗಳಲ್ಲಿ ವ್ಯಾಪಕವಾಗಿ ಬೆಳೆದಿರುವ ಲಂಟಾನ ಸಸ್ಯ ಪ್ರಬೇಧವು ಸಮಸ್ಯೆ ಉಲ್ಬಣಗೊಳ್ಳುವಂತೆ ಮಾಡಿದೆ. ರಾಷ್ಟ್ರೀಯ ನೀತಿ ಮತ್ತು ಕೋರ್ಟ್ ಆದೇಶ ಪ್ರಕಾರ ಕಾಡಿನಲ್ಲಿ ಬಿದ್ದ ಮರಗಳನ್ನು ತೆರವು ಮಾಡುವಂತಿಲ್ಲ. ಇದರಿಂದಲೂ ಬೆಂಕಿ ವ್ಯಾಪಕವಾಗಿ ಹಬ್ಬುತ್ತದೆ ಎಂದರು.
Advertisement