ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವತಿಯಿಂದ ಬುಡಕಟ್ಟು ಜನಾಂಗದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರನ್ನು ಸನ್ಮಾನಿಸಲಾಯಿತು. 25,000 ರೂಪಾಯಿ ನಗದು ಮತ್ತು ಉಚಿತ ಬಸ್ ಪಾಸ್ ನ್ನು ವಿತರಿಸಲಾಯಿತು.
ಅಲ್ಲದೆ ಕೆಎಸ್ಆರ್ ಟಿಸಿಯಲ್ಲಿ ಸೇವೆ ಸಲ್ಲಿಸಿದ 34 ಮಹಿಳಾ ಉದ್ಯೋಗಿಗಳನ್ನು ಕೂಡ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಹಿಳೆಯರಿಗೆ ಉದ್ಯೋಗದಲ್ಲಿ ಶೇಕಡಾ 33ರಷ್ಟು ಮೀಸಲಾತಿ ನೀಡಿದ ರಾಜ್ಯದ ಮೊದಲ ಸರ್ಕಾರಿ ಸಂಸ್ಥೆ ಕೆಎಸ್ಆರ್ ಟಿಸಿಯಾಗಿದೆ. ಕೆಎಸ್ಆರ್ ಟಿಸಿಯಲ್ಲಿ ಸುಮಾರು 10,000 ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, 37,569 ಸಿಬ್ಬಂದಿಯಲ್ಲಿ ಶೇಕಡಾ 6.65ರಷ್ಟು ಮಹಿಳೆಯರಿದ್ದಾರೆ.
ಮಹಿಳಾ ಸಿಬ್ಬಂದಿಯ ಮಕ್ಕಳು ಎರಡು ವರ್ಷಗಳಾಗುವವರೆಗೆ ಪ್ರತಿ ತಿಂಗಳು 500 ರೂಪಾಯಿಗಳನ್ನು ಮಕ್ಕಳ ರಕ್ಷಣೆ ಭತ್ಯೆ ಎಂದು ನೀಡಲಾಗುತ್ತದೆ. ಇದು ಇಬ್ಬರು ಮಕ್ಕಳಿಗೆ ಅನ್ವಯವಾಗುತ್ತದೆ ಎಂದು ಕೆಎಸ್ ಆರ್ ಟಿಸಿ ಹೇಳಿಕೆಯಲ್ಲಿ ತಿಳಿಸಿದೆ.