
ತುಮಕೂರು: ವಿಷಾಹಾರ ಸೇವಿಸಿ ಮೂವರು ವಿದ್ಯಾರ್ಥಿಗಳ ಸಾವಿನ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಊಟದಲ್ಲಿ ವಿಷ ಸೇರಿದ್ದು ಪಿತೂರಿಯಿಂದ ಎಂಬ ಆರೋಪ ಕೇಳಿಬಂದಿದೆ.
ಆಹಾರದಲ್ಲಿ ವಿಷ ಹೇಗೆ ಸೇರಿತು ಎಂಬ ಬಗ್ಗೆ ತನಿಖೆ ನಡೆಸಲು ಹೊರಟ ಪೊಲೀಸರಿಗೆ ಅನುಮಾನ ಮೂಡಿರುವುದು ರವಿ ಅರಸೀಕರೆ ಎಂಬಾತನ ಬಗ್ಗೆ. ರವಿ ಅರಸಿಕೆರೆ ವಿದ್ಯಾ ವಾರಿಧಿ ಶಾಲೆಯ ಮಾಜಿ ಪ್ರಾಂಶುಪಾಲ, ಶಾಲೆಯ ಮಾಲೀಕರಾದ ಕೆ.ಎಸ್ ಕಿರಣ್ ಕುಮಾರ್ ಮತ್ತು ಕವಿತಾ ಆತನನ್ನು ಕೆಲಸದಿಂದ ತೆಗೆದು ಹಾಕಿದ್ದರು.
ತುಮಕೂರಿನ ಚಿಕ್ಕನಾಯಕನ ಹಳ್ಳಿಯಲ್ಲಿವ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಬೋರ್ಡಿಂಗ್ ಶಾಲೆಯಲ್ಲಿ ರಾತ್ರಿ ಊಟ ಸೇವಿಸಿದ ಬಳಿಕ ಐವರು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಪ್ರಥಮ ಚಿಕಿತ್ಸೆ ಬಳಿಕೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಮಾರ್ಗ ಮಧ್ಯೆ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು . ಶಾಂತಮೂರ್ತಿ, ಆಕಾಂಕ್ಷ ಪಲ್ಲಕ್ಕಿ ಮತ್ತು ಶ್ರೇಯಸ್ ಮೃತ ಪಟ್ಟವರು. ಸುದರ್ಶನ್ ಎಂಬ ಮತ್ತೋರ್ವ ವಿದ್ಯಾರ್ಥಿ ಹಾಗೂ ವಸತಿ ಶಾಲೆಯ ಗಾರ್ಡ್ ಕೂಡ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವಸತಿ ಶಾಲೆಯಲ್ಲಿ 30 ವಿದ್ಯಾರ್ಥಿಗಳಿದ್ದು, ಅದರಲ್ಲಿ 26 ವಿದ್ಯಾರ್ಥಿಗಳು ರಾತ್ರಿ ಚಪಾತಿ ತಿಂದಿದ್ದರು. ಆದರೆ ಅವರಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳಲಿಲ್ಲ. ಚಪಾತಿ ಜೊತೆ ಸಾರು ತಿಂದವರಿಗೆ ಸಮಸ್ಯೆ ಕಾಣಿಸಿಕೊಂಡಿದ್ದು, ಹೊರಗಿನವರು ಸಾರಿಗೆ ವಿಷ ಬೆರೆಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ಎಸ್ ಪಿ ಇಶಾ ಪಂಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾರದ್ದಾದರೂ ಪಿತೂರ ಇದೆಯೆ ಎಂಬ ಅಂಶದ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಈ ಸಂಬಂಧ ಪಡೆಯಲಾಗಿದೆ.
Advertisement