ರಾಜ್ಯದಲ್ಲಿ 40 ಡಿಗ್ರಿಗೆ ಏರಿದ ತಾಪಮಾನ: ಸುಡು ಬಿಸಿಲಿಗೆ ಜನ ಕಂಗಾಲು

ಭೂಮಿ ಕಾದ ಕಾವಲಿಯಂತಾಗಿದ್ದು ರಣಬಿಸಿಲಿಗೆ ಜನ ಕಂಗಾಲಾಗಿದ್ದಾರೆ. ಮನೆಗಳಿಂದ ಹೊರಗೆ ಬರಲು ಹಿಂದೇಟು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಭೂಮಿ ಕಾದ ಕಾವಲಿಯಂತಾಗಿದ್ದು ರಣಬಿಸಿಲಿಗೆ ಜನ ಕಂಗಾಲಾಗಿದ್ದಾರೆ. ಮನೆಗಳಿಂದ ಹೊರಗೆ ಬರಲು ಹಿಂದೇಟು ಹಾಕುವಂತಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಸೂರ್ಯನ ಆರ್ಭಟ ಏರಿದೆ.  ಗುರುವಾರ ರಾಯಚೂರಿನಲ್ಲಿ 43.3 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದ್ದು, ರಾಜ್ಯದಲ್ಲೇ ಅತಿಹೆಚ್ಚು ತಾಪಮಾನ ದಾಖಲಾದ ಜಿಲ್ಲೆ ಎನಿಸಿದೆ.

ಬಳ್ಳಾರಿ, ಯಾದಗಿರಿ, ಕಲಬುರ್ಗಿ, ಬೀದರ್‌, ಚಿತ್ರದುರ್ಗ, ಬಾಗಲಕೋಟೆ, ವಿಜಯಪುರ, ಮಂಡ್ಯ, ಮೈಸೂರು, ಕೊಪ್ಪಳ, ಬೆಳಗಾವಿ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ದಾಖಲಾಗಿದೆ.

ಮಾರ್ಚ್‌ನಲ್ಲಿ ತಾಪಮಾನ ಹೆಚ್ಚುವುದು ಸಾಮಾನ್ಯ. ಆದರೆ, ಈ ಬಾರಿ ಮಧ್ಯಪ್ರದೇಶ ಹಾಗೂ ಒಡಿಶಾ ರಾಜ್ಯಗಳಲ್ಲಿ ತಾಪಮಾನ ಹೆಚ್ಚಾಗಿದೆ. ಆ ಭಾಗದಿಂದ ಬಿಸಿಗಾಳಿ ದಕ್ಷಿಣ ರಾಜ್ಯಗಳ ಕಡೆಗೆ ಬೀಸುತ್ತಿದೆ. ಇದರ ಜತೆಗೆ ಶುಭ್ರವಾದ ಆಕಾಶ ಇರುವುದರಿಂದ ಸೂರ್ಯನ ಕಿರಣಗಳು
ನೇರವಾಗಿ ಭೂಮಿಗೆ ಬೀಳುತ್ತಿವೆ. ಇದರಿಂದ ತಾಪಮಾನ ಏರಿಕೆಯಾಗುತ್ತಿದೆ’ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್. ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಉದ್ಯಾನನಗರಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರಿನಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. 1996ರ ಮಾರ್ಚ್‌ನಲ್ಲಿ 37.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. ಆದರೆ, ಗುರುವಾರ ನಗರದಲ್ಲಿ 37.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ಮೂಲಕ ಹಿಂದಿನ ದಾಖಲೆಯನ್ನು ಮೀರಿಸಿದೆ’ ಎಂದು ಅವರು ವಿವರಿಸಿದ್ದಾರೆ.

ಮಾರ್ಚ್ 13 ರ ಹೋಳಿ ನಂತರ ಬಾಗಲಕೋಟೆಯಲ್ಲಿ ಧಾರಾಕಾರ ಮಳೆಯಾಗಿತ್ತು, ಆದರೆ ಅಲ್ಲಿಯೂ ಸದ್ಯ 40 ಡಿಗ್ರಿ ಉಷ್ಣಾಂಶ ದಾಖಲಾಗಿದೆ, ಬೇಸಿಗೆ ಮುಗಿಯುವ ವೇಳೆಗೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಳ್ಳಾರಿಯಲ್ಲೇ ಅತಿ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತದೆ ಎಂದು ನಾಗರಿಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಕಲಬುರಗಿಯಲ್ಲೂ ಸಹ ಪರಿಸ್ಥಿತಿ ಭಿನ್ನವಾಗಿಲ್ಲ, 1 ಅಥವಾ 2 ಡಿಗ್ರಿ ಉಷ್ಣಾಂಶದಲ್ಲಿ ವ್ಯತ್ಯಾಸವಿರುತ್ತದೆ. ಸರ್ಕಾರ ಜನರಿಗೆ ಎಸಿ ಭಾಗ್ಯ ನೀಡಬೇಕೆಂದು ಕಲಬುರಗಿ ಸರ್ಕಾರಿ ಅಧಿಕಾರಿ ಚಂದ್ರಕಾಂತ್ ಎಂಬುವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com