ನೋಟು ಅಮಾನ್ಯಗೊಂಡು ತಿಂಗಳು ಆರಾಯ್ತು: ಬೆಂಗಳೂರಿನ ವರ್ತಕರಿಗೆ ಇನ್ನೂ ಆರದ ಬಿಸಿ

ಅಧಿಕ ಮೌಲ್ಯದ ನೋಟುಗಳ ಅಮಾನ್ಯತೆಗೊಂಡು 6 ತಿಂಗಳು ಕಳೆದರೂ ಕೃಷ್ಣರಾಜ ಮಾರುಕಟ್ಟೆಯ...
ಕೃಷ್ಣರಾಜ ಮಾರುಕಟ್ಟೆಯ ದೃಶ್ಯ
ಕೃಷ್ಣರಾಜ ಮಾರುಕಟ್ಟೆಯ ದೃಶ್ಯ
ಬೆಂಗಳೂರು: ಅಧಿಕ ಮೌಲ್ಯದ ನೋಟುಗಳ ಅಮಾನ್ಯತೆಗೊಂಡು 6 ತಿಂಗಳು ಕಳೆದರೂ ಕೃಷ್ಣರಾಜ ಮಾರುಕಟ್ಟೆಯ ಸಗಟು ವ್ಯಾಪಾರಿಗಳ ವಹಿವಾಟು ಸಹಜ ಸ್ಥಿತಿಗೆ ಬಂದಿಲ್ಲ. ರಾಜ್ಯಾದ್ಯಂತ ಬರಗಾಲ ಕೂಡ ಇದಕ್ಕೆ ಮತ್ತೊಂದು ಕಾರಣವಾಗಿದೆ.
ನವೆಂಬರ್ 8 ರ ನೋಟು ಅಮಾನ್ಯತೆ ನಂತರ ಪರಿಸ್ಥಿತಿ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ ಎಂದು ಕೆ.ಆರ್.ಮಾರ್ಕೆಟ್ ನ ಕೆಲವು ವ್ಯಾಪಾರಿಗಳು ಹೇಳುತ್ತಾರೆ.
ಗ್ರಾಹಕರು 2,000 ರೂಪಾಯಿ ನೋಟು ಹಿಡಿದುಕೊಂಡು ಬರುತ್ತಾರೆ. ನಮ್ಮಲ್ಲಿ ಚಿಲ್ಲರೆಯಿಲ್ಲದಿದ್ದರೆ ಯಾವುದೇ ವಸ್ತು ಖರೀದಿಸದೆ ಮುಂದೆ ಹೋಗುತ್ತಾರೆ. ಇದು ನಮ್ಮ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವ್ಯಾಪಾರಿಗಳಾದ ಗೋವಿಂದ ಮತ್ತು ಪ್ರೇಮಾ. ಬೀದಿಬದಿಯಲ್ಲಿ  ಇವರು ತಮ್ಮ ಅಂಗಡಿಗಳನ್ನು ಹಾಕಿರುವುದರಿಂದ ಬಿಬಿಎಂಪಿಗೆ ಬಾಡಿಗೆಯಾಗಿ ಕನಿಷ್ಠ ಹಣವನ್ನು ನೀಡಬೇಕಾಗುತ್ತದೆಯಷ್ಟೆ. ಒಳಗೆ ಅಂಗಡಿ ಇಟ್ಟುಕೊಂಡವರು ಭಾರೀ ಬಾಡಿಗೆ ಹಣ ನೀಡಬೇಕಾಗುತ್ತದೆ.
ತರಕಾರಿ ಮಾರಾಟಗಾರ ಸೈಯದ್ ಅಯಝ್ ವಾರ್ಸಿ, ತಮ್ಮ ಅಂಗಡಿಗೆ ತಿಂಗಳಿಗೆ 25,000 ರೂಪಾಯಿ ಬಾಡಿಗೆ ನೀಡಬೇಕು. ಮಾಲಿಕರು ತಮ್ಮ ಬಂಧುವಿಗೆ ಪರಿಚಯ ಎಂಬ ಕಾರಣಕ್ಕೆ ಅಷ್ಟು, ಇಲ್ಲದಿದ್ದರೆ ತಿಂಗಳಿಗೆ 35,000 ರೂಪಾಯಿ ಬಾಡಿಗೆ ನೀಡಬೇಕಾಗುತ್ತದೆ. ಹಣ್ಣು ಮಾರಾಟಗಾರ ಸೈಯದ್ ಅರ್ಬಾಝ್ ದಿನಕ್ಕೆ 1,300 ರೂಪಾಯಿ ಬಾಡಿಗೆ ಕೊಡುತ್ತಾರೆ.
ಈ ಹಿಂದೆ ನಾನು ದಿನಕ್ಕೆ 7,000 ರೂಪಾಯಿಗಳಷ್ಟು ವಹಿವಾಟು ನಡೆಸುತ್ತಿದ್ದೆ. ಆದರೆ ಅದೀಗ ದಿನಕ್ಕೆ ಸಾವಿರ ರೂಪಾಯಿಗಿಳಿದಿದೆ. ಮಾರುಕಟ್ಟೆ ಸುತ್ತಮುತ್ತ ಸ್ವಚ್ಛವಾಗಿಲ್ಲದಿರುವುದು ಕೂಡ ಇದಕ್ಕೆ ಕಾರಣವಾಗಿದೆ. ಮುಖ್ಯ ಕಟ್ಟಡದಲ್ಲಿ ಪಾರ್ಕಿಂಗ್ ಗೆ ವ್ಯವಸ್ಥೆಯಿದ್ದರೂ ಕೂಡ ಅಲ್ಲಿಗೆ ಹೋಗುವುದು ಸುಲಭವಲ್ಲ. ಹೊರಗೆ ಪಾರ್ಕ್ ಮಾಡಿದರೆ ವಿಪರೀತ ದಂಡ ಕಟ್ಟಬೇಕಾಗುತ್ತದೆ. ವ್ಯಾಪಾರಿಗಳಿಗೆ ಮಾರುಕಟ್ಟೆ ಹೊರಗೆ ಕೂಡ ವ್ಯಾಪಾರ ಮಾಡಲು ಅವಕಾಶವಿರುವುದರಿಂದ ಗ್ರಾಹಕರು ಅಲ್ಲಿಗೆ ಬಂದು ಖರೀದಿಸಿಕೊಂಡು ಹೋಗುತ್ತಾರೆ, ಒಳಗೆ ಬರುವುದಿಲ್ಲ ಎನ್ನುತ್ತಾರೆ.
ತೀವ್ರ ಬರಗಾಲದಿಂದ ಕೆಲವು ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಗ್ರಾಹಕರು ಖರೀದಿಸುವುದು ಕಡಿಮೆಯಾಗಿದೆ.  
ಕಿಲೋ ಬೀನ್ಸ್ ಮತ್ತು ಕ್ಯಾರೆಟ್ ಗೆ 100 ಮತ್ತು 60 ರೂಪಾಯಿಗಳಿವೆ. ಕೆಲ ದಿನಗಳ ಹಿಂದೆ 30ರಿಂದ 20 ರೂಪಾಯಿಗಳಿತ್ತು. ರಸೆಲ್ ಮಾರುಕಟ್ಟೆಯಲ್ಲಿ ಬೀನ್ಸ್ ಮತ್ತು ಕ್ಯಾರೆಟ್ ಬೆಲೆ ಕೆಜಿಗೆ 120 ಮತ್ತು 80 ರೂಗಳಿವೆ ಎನ್ನುತ್ತಾರೆ ವ್ಯಾಪಾರಿ ಜಮೀನ್ ಅಹ್ಮದ್.
ರಸ್ತೆಯಲ್ಲಿರುವ ಸ್ಟಾಲ್ ಗಳ ಮೇಲೆ ಕಣ್ಣು: ಮಾರುಕಟ್ಟೆಯ ಹತ್ತಿರ ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ಪೊಲೀಸರ ಕಿರುಕುಳ ಇದ್ದೇ ಇರುತ್ತದೆ ಎನ್ನುತ್ತಾರೆ ಹಣ್ಣು ವ್ಯಾಪಾರಿ ಅಶೋಕ್. ಸುಮಾರು 9,000 ರೂಪಾಯಿ ಮೌಲ್ಯದ ದಾಳಿಂಬೆ ಹಣ್ಣು ಮಾರುತ್ತಿದ್ದಾಗ ಪೊಲೀಸರಿಂದ ಹೊಡೆಸಿಕೊಂಡೆ. ಅವರು ವ್ಯಾಪಾರ ಮಾಡಲು ಬಿಡಲಿಲ್ಲ. ಅದು ನಷ್ಟವಾಗಿ ಹೋಯಿತು ಎನ್ನುತ್ತಾರೆ.
ಆದರೆ ವಾಹನ ಸಂಚಾರ ಮತ್ತು ಜನಗಳಿಗೆ ನಡೆದುಕೊಂಡು ಹೋಗಲು ತೊಂದರೆ ಮಾಡುವ ವ್ಯಾಪಾರಿಗಳನ್ನು ಮಾತ್ರ ನಾವು ತಡೆಯುತ್ತೇವೆ ಎನ್ನುತ್ತಾರೆ ಕೆ.ಆರ್.ಮಾರ್ಕೆಟ್ ನ ಸಂಚಾರಿ ಪೊಲೀಸರೊಬ್ಬರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com