ಬೆಂಗಳೂರು: ಕುರುಬರಹಳ್ಳಿಯ ಈ ವಾಣಿಜ್ಯ ಸಂಕೀರ್ಣವನ್ನು ದಾಟಿ ನೀವು ಹೋದರೆ ಅಲ್ಲಿ ಶಾಲೆಯೊಂದು ಇದೆ ಎಂದು ನೀವು ನಿರೀಕ್ಷಿಸಲು ಸಾಧ್ಯವಿಲ್ಲ. ನಿಮಗೆ ಆಶ್ಚರ್ಯವಾದರೂ ಕೂಡ ಸತ್ಯ. ಈ ಶಾಲೆಯ ಕಟ್ಟಡದ ಅಳತೆ ಕೇವಲ 10x10 ಚದರಡಿ. ಬಾಡಿಗೆ ಕಟ್ಟಡದಲ್ಲಿರುವ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೇವಲ 5.
10 ವಿದ್ಯಾರ್ಥಿಗಳಿಗಿಂತ ಕಡಿಮೆಯಿರುವ ಶಾಲಾ ಕಾಲೇಜುಗಳನ್ನು ರಾಜ್ಯ ಶಿಕ್ಷಣ ಇಲಾಖೆ ಒಂದು ಕಡೆ ಮುಚ್ಚುತ್ತಿದ್ದರೆ ಇನ್ನೊಂದೆಡೆ ಸಾರ್ವಜನಿಕ ಶಿಕ್ಷಣ ಇಲಾಖೆ ಈ ವಾಣಿಜ್ಯ ಸಂಕೀರ್ಣದಲ್ಲಿ ಖಾಸಗಿ ಶಾಲೆ ನಡೆಸಲು ಅನುಮತಿ ನೀಡಿದೆ.
ಇಷ್ಟೊಂದು ಸಣ್ಣ ಜಾಗದಲ್ಲಿ ಶಾಲೆ ನಡೆಸಲು ಶಿಕ್ಷಣ ಇಲಾಖೆ ಹೇಗೆ ಅನುಮತಿ ನೀಡಿರಬಹುದು ಎಂದು ಸುತ್ತಮುತ್ತಲಿನ ನಿವಾಸಿಗಳು ಸಂದೇಹ ವ್ಯಕ್ತಪಡಿಸುತ್ತಿದ್ದು ಈ ಸಂಬಂಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಲಾಗಿದೆ.
ದೂರಿನ ಜೊತೆ ಶಾಲೆಯ ಫೋಟೋವನ್ನು ಕೂಡ ನೀಡಿದ್ದಾರೆ. ದೂರಿನ ಆಧಾರದ ಮೇಲೆ ಶಿಕ್ಷಣ ಇಲಾಖೆಗೆ ಪತ್ರ ಬರೆಯಲು ಆಯೋಗ ನಿರ್ಧರಿಸಿದೆ. ಕರ್ನಾಟಕ ಸರ್ಕಾರದಿಂದ ಅಂಗೀಕೃತಗೊಂಡ ಸೈಂಟ್ ಜಾಸೆಫ್ ಶಾಲೆ ಎಂದು ದೂರಿನಲ್ಲಿ ಬರೆಯಲಾಗಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಮಕ್ಕಳ ಹಕ್ಕು ಆಯೋಗದ ಅಧಿಕಾರಿಯೊಬ್ಬರು, ಶಿಕ್ಷಣ ಇಲಾಖೆ ಶಾಲೆ ನಡೆಸಲು ಅನುಮತಿ ನೀಡಿರುವುದರಿಂದ ದೂರಿನ ಆಧಾರದ ಮೇಲೆ ನೊಟೀಸ್ ಜಾರಿ ಮಾಡಿ ವರದಿ ಕೇಳುತ್ತವೆ ಎಂದು ತಿಳಿಸಿದ್ದಾರೆ.
ದೂರಿನ ಪ್ರಕಾರ, ಕಳೆದ ಶೈಕ್ಷಣಿಕ ವರ್ಷದಲ್ಲಿ ಕೇವಲ 5 ಮಂದಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇನ್ನೊಂದು ಆಸಕ್ತಿಕರ ವಿಷಯವೆಂದರೆ ಇವರೆಲ್ಲರೂ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾದವರು.
ಈ ಬಗ್ಗೆ ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿದಾಗ, ನಗರದಲ್ಲಿ ಸಾವಿರಾರು ಶಾಲೆಗಳಿವೆ. ಮಕ್ಕಳ ಹಕ್ಕು ಆಯೋಗದಿಂದ ದೂರು ಬಂದ ತಕ್ಷಣ ಅದನ್ನು ಪರೀಕ್ಷಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.