ಮನೆ ಬಾಗಿಲಿಗೆ ಬರಲಿದೆ ಮಾಂಸ ಮತ್ತು ಕುರಿ ಮರಿ: ರಾಜ್ಯ ಸರ್ಕಾರದ ಹೊಸ ಯೋಜನೆ

ನಂದಿನಿ ಮತ್ತು ಹಾಪ್ ಕಾಮ್ಸ್ ಗಳ ರೀತಿಯಲ್ಲಿ ಮಳಿಗೆ ತೆಗೆದು ಅಲ್ಲಿ ಕುರಿ ಮತ್ತು ಮೇಕೆ ಮಾಂಸ ಮತ್ತು ಕುರಿಮರಿ ಮಾರಾಟ ಮಾಡಲು ಕರ್ನಾಟಕ ಕುರಿ ಮತ್ತು ಉಣ್ಣೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ನಂದಿನಿ ಮತ್ತು ಹಾಪ್ ಕಾಮ್ಸ್ ಗಳ ರೀತಿಯಲ್ಲಿ ಮಳಿಗೆ ತೆಗೆದು ಅಲ್ಲಿ ಕುರಿ ಮತ್ತು ಮೇಕೆ ಮಾಂಸ  ಮತ್ತು ಕುರಿಮರಿ ಮಾರಾಟ ಮಾಡಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿರ್ಧರಿಸಿದೆ.
ಈ ಮಳಿಗೆಗಳಲ್ಲಿ ಸಿಗುವ ಮಾಂಸ  ಹಾಗೂ ಕುರಿಮರಿಗಳು ಕಡಿಮೆ ದರದಲ್ಲಿದ್ದು, ಹೈಜೆನಿಕ್ ಆಗಿರುತ್ತದೆ ಎಂದು ಹೇಳಲಾಗಿದೆ.ಜನರು ಆನ್ ಲೈನ್ ನಲ್ಲಿಯೂ ಮಾಂಸಕ್ಕಾಗಿ ಆರ್ಡರ್ ಮಾಡಬಹುದು. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಮಟನ್ ಕತ್ತರಿಸಿ ಪ್ಯಾಕ್ ಮಾಡಿ ಅವರ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ.
ರಾಜ್ಯದಲ್ಲಿ ಒಂದೂವರೆ ಕೋಟಿ ಕುರಿ ಮತ್ತು ಮೇಕೆಗಳಿವೆ, ಸುಮಾರು 8 ಲಕ್ಷ ರೈತರು ಕುರಿ ಸಾಕುತ್ತಿದ್ದಾರೆ. ಈ ರೈತರಿಗೆ ಬೆಂಬಲ ಹಾಗೂ ಪ್ರೋತ್ಸಾಹ ನೀಡಲು ರಾಜ್ಯಾದ್ಯಂತ ಮಳಿಗೆಗಳನ್ನು ತೆರೆದು ಅಲ್ಲಿ ಮಾಂಸ ಮತ್ತು ಕುರಿಮರಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೃಷ್ಣ ಹೇಳಿದ್ದಾರೆ.
ರಾಜ್ಯಾದ್ಯಂತ 40 ಮಳಿಗೆಗಳನ್ನು ತೆರೆಯಲು ನಿರ್ಧರಿಸಿರುವ ಸರ್ಕಾರ ಅನುದಾನ ಕೂಡ ಬಿಡುಗಡೆ ಮಾಡಿದೆ. ಪ್ರತಿಯೊಂದು ಮಳಿಗೆಗೂ 1.25 ಲಕ್ಷ ಸಬ್ಸಿಡಿ ನೀಡಲಿದೆ, ಇಲಾಖೆಯ ಸಿಬ್ಬಂದಿಗಳೇ ಮಳಿಗೆಗಳನ್ನು ನಿರ್ವಹಣೆ ಮಾಡುತ್ತಾರೆ.ಮಳಿಗೆಗಳ ಮೇಲ್ವಿಚಾರಣೆ ನಡೆಸಿ ಅದರ ಸ್ವಚ್ಛತೆ ಮತ್ತು ಗುಣಮಟ್ಟದ ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ,
ಮಳಿಗೆಗಳನ್ನು ಆರಂಭಿಸಲು ಸರ್ಕಾರ ಮಾರ್ಗಸೂಚಿ ರಚಿಸಿದ್ದು, ಮಳಿಗೆಗಳಲ್ಲಿ ಸಿಸಿಟಿವಿ ಅಳವಡಿಸಲಾಗುವುದು,ಮಾಂಸ ತಾಜಾ ಆಗಿರುವಂತೆ ದಿನದ 24 ಗಂಟೆಗಳ ಕಾಲ ಏರ್ ಕಂಡಿಷನರ್ ವ್ಯವಸ್ಥೆ ಇರುತ್ತದೆ, ಕುರಿ ಅಭಿವೃದ್ಧಿ ನಿಗಮ ಐದು ಕುರಿ ಫಾರಂಗಳನ್ನು ನಡೆಸುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಈ ಐದು ಫಾರಂಗಳಿಂದ  ಮಳಿಗೆಗಳಿಗೆ ಮಾಂಸ ಪೂರೈಸಲಾಗುತ್ತದೆ. ತುಮಕೂರು ಜಿಲ್ಲೆಯ ಶಿರಾದಲ್ಲಿ ಕುರಿಗಳನ್ನು ಕತ್ತರಿಸಲು ಬಹಳ ದೊಡ್ಡ  ಕಸಾಯಿ ಖಾನೆ ಸ್ಥಾಪಿಸಲಾಗುವುದು.
ಸುಮಾರು 20 ಎಕರೆ ಜಾಗದಲ್ಲಿ ಈ ಕಸಾಯಿಖಾನೆ ಸ್ಥಾಪಿಸಲಾಗುವುದು, ಇದಕ್ಕಾಗಿ ಸರ್ಕಾರ 28 ಕೋಟಿ ರು ಅನುದಾನ ಬಿಡುಗಡೆ ಮಾಡಿದೆ. ಪ್ರತಿದಿನ ಸುಮಾರು 15 ಸಾವಿರ ಕುರಿಗಳನ್ನು ಕತ್ತರಿಸಲಾಗುವುದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆಗಳನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com