ಬೆಂಗಳೂರು: ತಲಕಾವೇರಿ ವನ್ಯಜೀವಿ ಅರಣ್ಯಧಾಮ ಸೂಕ್ಷ್ಮ ಪರಿಸರ ವಲಯ ಎಂದು ಕೇಂದ್ರ ಸರ್ಕಾರ ಗುರುತಿಸಿದೆ.
ಈ ವಲಯದ 1 ರಿಂದ 16 ಕಿಮೀ ವರೆಗಿನ ಪ್ರದೇಶವನ್ನು ರಕ್ಷಿತಾರಣ್ಯ ಎಂದು ಗುರುತಿಸಲಾಗಿದೆ. ಈ ಸೂಕ್ಷ್ಮ ಪರಿಸರ ವಲಯ ಕೇರಳ ರಾಜ್ಯದ ಗಡಿಯೊಂದಿಗೆ ಸೇರಿಕೊಂಡಿದೆ.
ಮೇ 15ರ ನೋಟಿಫಿಕೇಶನ್ ಪ್ರಕಾರ, ಎಲ್ಲಾ ಹೊಸ ವಾಣಿಜ್ಯ ಗಣಿಗಾರಿಕೆ, ಹೊಸ ಕೈಗಾರಿಕೆಗಳು, ಹಾಗೂ ವಿಸ್ತ್ರತ ಮಾಲಿನ್ಯ ಮಾಡುವ ಕೈಗಾರಿಕೆಗಳು, ಸಾಮಿಲ್ ಗಳು, ದೊಡ್ಡ ಪ್ರಮಾಣದ ಹೈಡ್ರೋ ಎಲೆಕ್ಟ್ರಿಕ್ ಯೋಜನೆ, ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಭೂಮಿಯ ಬಳಕೆ ರೀತಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಅಂದರೆ ಕೃಷಿ ಭೂಮಿಯಾಗಿ ಬದಲಾವಣೆ, ತೋಟಗಾರಿಕೆ ಪ್ರದೇಶವನ್ನು ವಾಣಿಜ್ಯ ಅಥವಾ ಕೈಗಾರಿಕಾ ಚಟುವಟಿಕೆಗಳಿಗೆ ಬಳಸಲು ಅನುಮತಿ ನೀಡಲಾಗುವುದಿಲ್ಲ. ರಕ್ಷಿತಾರಣ್ಯ ಪ್ರದೇಶದಲ್ಲಿ ಯಾವುದೇ ಹೊಟೆಲ್ ಅಥವಾ ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಹೇಳಿದ್ದಾರೆ.