ಮುಷ್ಕರ ನಿರತ ವೈದ್ಯರು
ರಾಜ್ಯ
ಧಾರವಾಡ: ಖಾಸಗಿ ವೈದ್ಯರ ಮುಷ್ಕರಕ್ಕೆ ಮತ್ತೊಂದು ಬಲಿ
ರಾಜ್ಯ ಸರ್ಕಾರದ ಉದ್ದೇಶಿತ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ(ಕೆಪಿಎಂಇ) ಕಾಯ್ದೆ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು.....
ಧಾರವಾಡ: ರಾಜ್ಯ ಸರ್ಕಾರದ ಉದ್ದೇಶಿತ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ(ಕೆಪಿಎಂಇ) ಕಾಯ್ದೆ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಧಾರವಾಡದಲ್ಲಿ 26 ವರ್ಷದ ಯುವಕ ಮೃತಪಟ್ಟಿದ್ದಾರೆ.
ಇದೇ 26ಕ್ಕೆ ಮದುವೆಯಾಗಬೇಕಿದ್ದ ಹೊಸಯಲ್ಲಾಪುರ ನಿವಾಸಿ ಕಾರ್ತಿಕ್ ರಾಕೋಡೆ ಎಂಬ ಯುವಕನಿಗೆ ಇಂದು ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಿದೆ. ಕುಟುಂಬ ಸದಸ್ಯರು ಕೂಡಲೇ ಕಾರ್ತಿಕ್ ನನ್ನು ಕೆಲವು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮುಷ್ಕರ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಲಾಗಿದೆ. ಅಂತಿಮವಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ದಾರಿ ಮಧ್ಯೆಯೇ ಯುವಕ ಮೃತಪಟ್ಟಿರುವುದಾಗಿ ಸರ್ಕಾರಿ ವೈದ್ಯರು ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಯ ವೈದರು ತುರ್ತು ಚಿಕಿತ್ಸೆಯಾದರೂ ನೀಡಬೇಕು. ವೈದ್ಯರ ಮುಷ್ಕರದಿಂದಾಗಿ ಹಲವರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಕಾರ್ತಿಕ್ ಕುಟುಂಬದವರು ಹೇಳಿದ್ದಾರೆ.
ವೈದ್ಯರು ತಾವು ವೃತ್ತಿಗೆ ಸೇರಿಕೊಳ್ಳುವ ಮುನ್ನ ಮಾಡಿದ ಪ್ರಮಾಣವನ್ನು ಮರೆತಿದ್ದಾರೆ. ಅದೊಂದು ಸೇವೆ ಆಧಾರಿತ ವೃತ್ತಿ. ಹಣ ಹೂಡಿಕೆ ಮಾಡಿ ಲಾಭ ಗಳಿಸಲು ಅದು ವ್ಯವಹಾರ ಅಲ್ಲ. ವೈದ್ಯರು ಮೊದಲು ಚಿಕಿತ್ಸೆ ನೀಡಲಿ ಎಂದು ಕಾರ್ತಿಕ್ ಸ್ನೇಹಿತ ಕೃಷ್ಣ ಚವ್ಹಾಣ್ ಅವರು ಮುಷ್ಕರ ನಿರತ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ