ಸಿಎಂ ಸಂಧಾನ ಸಫಲ: ರಾಜ್ಯಾದ್ಯಂತ ಖಾಸಗಿ ವೈದ್ಯರ ಮುಷ್ಕರ ವಾಪಸ್

ರಾಜ್ಯ ಸರ್ಕಾರದ ಉದ್ದೇಶಿತ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ(ಕೆಪಿಎಂಇ) ಕಾಯ್ದೆ ವಿರೋಧಿಸಿ ಕಳೆದ ನಾಲ್ಕು ದಿನಗಳಿಂದ ಮುಷ್ಕರ....
ವೈದ್ಯರೊಂದಿಗೆ ಸಿಎಂ ಸಂಧಾನ ಸಭೆ
ವೈದ್ಯರೊಂದಿಗೆ ಸಿಎಂ ಸಂಧಾನ ಸಭೆ
ಬೆಳಗಾವಿ: ರಾಜ್ಯ ಸರ್ಕಾರದ ಉದ್ದೇಶಿತ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ(ಕೆಪಿಎಂಇ) ಕಾಯ್ದೆ ವಿರೋಧಿಸಿ ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ರಾಜ್ಯಾದ್ಯಂತ ವೈದ್ಯರು ತಮ್ಮ ಮುಷ್ಕರವನ್ನು ಶುಕ್ರವಾರ ಹಿಂಪಡೆದಿದ್ದಾರೆ. 
ಒಂದು ಕಡೆ ಖಾಸಗಿ ವೈದ್ಯರು ಈ ಕೂಡಲೈ ಮುಷ್ಕರ ಹಿಂಪಡೆದ ಸೇವೆಗೆ ಹಾಜರಾಗಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶ ನೀಡಿದ್ದರೆ, ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಖಾಸಗಿ ವೈದ್ಯರ ಜತೆ ನಡೆಸಿದ ಸಭೆ ಯಶಸ್ವಿಯಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಮತ್ತು ಖಾಸಗಿ ವೈದ್ಯರ ನಡುವಿನ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ.
ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವೈದ್ಯರ ಸಂಘದ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ವಿಧೇಯಕಕ್ಕೆ ಕೆಲವು ಬದಲಾವಣೆ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದ್ದು, ನಮ್ಮ ಆತಂಕಗಳನ್ನು ದೂರ ಮಾಡುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ ಮತ್ತು ಇಂದಿನ ಸಭೆ ತಮಗೆ ತೃಪ್ತಿ ತಂದಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಎಚ್ ಎನ್ ರವೀಂದ್ರ ಅವರು ಹೇಳಿದ್ದಾರೆ.
ನಮ್ಮ ಮುಷ್ಕರಿಂದಾಗಿ ಸಾವು ಸಂಭವಿಸಿದ್ದರೆ ಜನರಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದು ಡಾ.ರವೀಂದ್ರ ಅವರು ತಿಳಿಸಿದ್ದಾರೆ.
ಇನ್ನು ವೈದ್ಯರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಕೆಪಿಎಂಇ ಕಾಯ್ದೆ ಬಗ್ಗೆ ವೈದ್ಯರಲ್ಲಿ ಕೆಲವು ಆತಂಕಗಳಿದ್ದವು. ಅವುಗಳನ್ನು ನಿವಾರಿಸಲಾಗಿದ್ದು, ಮುಷ್ಕರ ಹಿಂಪಡೆಯಲು ಒಪ್ಪಿಕೊಂಡಿದ್ದಾರೆ ಎಂದರು. ಅಲ್ಲದೆ ಕೆಲ ತಿದ್ದುಪಡಿಗಳೊಂದಿಗೆ ಸೋಮವಾರ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com