ಮಕ್ಕಳ ಸುರಕ್ಷತೆ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿ ಗಮನ ಸೆಳೆದ ಕನಕಾ

ನಮಸ್ಕಾರ ಎಂದು ಮಾತು ಆರಂಭಿಸಿದ ಕನಕಾ ನಾವು ಮಕ್ಕಳು ನಾವು ಗೆಳೆಯರು ಎಂಬ ಕನ್ನಡ ....
ಸಂಸತ್ತನ್ನುದ್ದೇಶಿಸಿ ಮಾತನಾಡಿದ ಕನಕಾ
ಸಂಸತ್ತನ್ನುದ್ದೇಶಿಸಿ ಮಾತನಾಡಿದ ಕನಕಾ
ಬೆಂಗಳೂರು: ನಮಸ್ಕಾರ ಎಂದು ಮಾತು ಆರಂಭಿಸಿದ ಕನಕಾ ನಾವು ಮಕ್ಕಳು ನಾವು ಗೆಳೆಯರು ಎಂಬ ಕನ್ನಡ ಪದ್ಯದ ಸಾಲುಗಳನ್ನು ಓದಿದಳು. ನಂತರ ಮಕ್ಕಳಿಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಮಾತನಾಡಿದಳು. ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ಕಿರುಕುಳ, ಹಲ್ಲೆ, ಮಕ್ಕಳ ಕಳ್ಳಸಾಗಣೆ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿ ಅಲ್ಲಿ ಸೇರಿದವರ ಗಮನ ಸೆಳೆದಳು. 
ಇದು ನಿನ್ನೆ ದೆಹಲಿಯಲ್ಲಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರಿನ ಕನಕಾಳ ಭಾಷಣದ ಸಾರಾಂಶ.
ನಗರದ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿರುವ 17 ವರ್ಷದ ಕನಕಾ ನಿನ್ನೆ ಸಾರ್ವತ್ರಿಕ ಮಕ್ಕಳ ದಿನಾಚರಣೆ ಪ್ರಯುಕ್ತ ಸಂಸತ್ತನ್ನು ಉದ್ದೇಶಿಸಿ ಮಾತನಾಡಲು ಯುನಿಸೆಫ್ ನಿಂದ ಆಯ್ಕೆಯಾಗಿದ್ದಳು. ದೇಶಾದ್ಯಂತದಿಂದ ಆಯ್ಕೆಗೊಂಡ 30 ಮಕ್ಕಳಲ್ಲಿ ಕರ್ನಾಟಕದ ಕನಕಾ  ಕೂಡ ಒಬ್ಬಳು. 10 ನಿಮಿಷದ ಭಾಷಣದಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಬೆಳಕು ಚೆಲ್ಲಿದ ಕನಕಾ  ಬಾಲ ಕಾರ್ಮಿಕಳಾಗಿ ತನ್ನದೇ ಅನುಭವವನ್ನು ಹಂಚಿಕೊಂಡಳು.
ಮಕ್ಕಳು ತಮ್ಮ ಬಾಲ್ಯ ಜೀವನವನ್ನು ಖುಷಿಯಾಗಿ ಅನುಭವಿಸಲು ಮತ್ತು ಅವರ ಸುರಕ್ಷತೆ ಕಡೆ ಸರ್ಕಾರದ ಚುನಾಯಿತ ಪ್ರತಿನಿಧಿಗಳು ಗಮನ ಹರಿಸಬೇಕು ಎಂದ ಕನಕಾ  ತಾನು 5ನೇ ತರಗತಿಯಲ್ಲಿದ್ದಾಗ ಶಾಲಾ ಶಿಕ್ಷಕಿಯಿಂದ ನಿಂದನೆಗೊಳಗಾದ ತನ್ನ ಸ್ನೇಹಿತೆಯ ಘಟನೆಯನ್ನು ನೆನಪು ಮಾಡಿಕೊಂಡಳು. 
''ನಾನು ಈ ದೇಶದ ಕೆಲವು ಹೆಣ್ಣು ಮಕ್ಕಳ ಅವಸ್ಥೆಯನ್ನು ಸರ್ಕಾರದ ಮುಂದಿಡಲು ಪ್ರಯತ್ನಿಸಿದ್ದೇನೆ. ನನ್ನ ತಾಯಿಯನ್ನು ಕಳೆದುಕೊಂಡ ನಂತರ ಬಾಲ ಕಾರ್ಮಿಕಳಾಗಿ ತುಂಬಾ ಕಷ್ಟಪಟ್ಟಿದ್ದೇನೆ. ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸಾಕಷ್ಟು ನಿಂದನೆ ಮತ್ತು ಅವಮಾನಗಳನ್ನು ಎದುರಿಸಿದ್ದೇನೆ. ಬಾಲ್ಯ ಜೀವನವನ್ನು ಅನುಭವಿಸಲು ನನಗೆ ಸಾಧ್ಯವಾಗಲಿಲ್ಲ. ಇದನ್ನು ನಾನು ನನ್ನ ಭಾಷಣದಲ್ಲಿ ಹಂಚಿಕೊಂಡಿದ್ದೇನೆ'' ಎಂದು ಕನಕಾ  ತಾನು ಸಂಸತ್ತಿನಲ್ಲಿ ಮಾಡಿದ ಭಾಷಣದ ಬಗ್ಗೆ ಹೇಳುತ್ತಾಳೆ. 
ಸಂಸತ್ತನ್ನುದ್ದೇಶಿಸಿ ಮಾಡಿದ ಭಾಷಣದ ಅನುಭವದ ಬಗ್ಗೆ ಕೇಳಿದಾಗ, ಇದೊಂದು ಜೀವನದಲ್ಲಿ ಮರೆಯಲಾರದ ಕ್ಷಣ. ದೆಹಲಿಗೆ ಹೋಗಿ ಸಂಸತ್ತು ಪ್ರವೇಶಿಸುತ್ತೇನೆ ಎಂದು ನಾನು ಎಣಿಸಿಯೇ ಇರಲಿಲ್ಲ. ಸಂಸತ್ತು ಪ್ರವೇಶಿಸುವಾಗ ನನಗೆ ಅರಿವಿಲ್ಲದಂತೆ ಕಣ್ಣೀರು ಸುರಿಯಿತು. ನಾನು ಎಷ್ಟು ಖುಷಿಯಾಗಿದ್ದೇನೆಂದು ನನಗೆ ವ್ಯಕ್ತಪಡಿಸಲು ಸಾಧ್ಯವಿಲ್ಲ. ಇಲ್ಲಿಯವರೆಗೆ ಬರಲು ನನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ವಿಶೇಷವಾಗಿ ಸ್ಪರ್ಶ ಸರ್ಕಾರೇತರ ಸಂಘಟನೆಗೆ ಧನ್ಯವಾದ ಹೇಳುತ್ತೇನೆ. ಅದರ ಸಂಘಟಕರು ಇಂದು ನನಗೆ ಪೋಷಕರ ಸ್ಥಾನದಲ್ಲಿ ನಿಂತಿದ್ದಾರೆ ಎಂದು ಖುಷಿಯಿಂದ ಹೇಳಿದಳು.
ಕರ್ನಾಟಕದ ಸಂಸದರು ಗೈರು: ಈ ಸಂದರ್ಭದಲ್ಲಿ ಕರ್ನಾಟಕದ ಯಾವೊಬ್ಬ ಸಂಸದರು ಕೂಡ ಸಂಸತ್ತಿನಲ್ಲಿರಲಿಲ್ಲ ಎಂಬುದು ಮಾತ್ರ ಬೇಸರದ ಸಂಗತಿ. ಬೇರೆ ರಾಜ್ಯಗಳ ಸಂಸದರು ಮಕ್ಕಳನ್ನು ಪ್ರೋತ್ಸಾಹಿಸಲು ಸಂಸತ್ತಿನಲ್ಲಿದ್ದರೆ ಕರ್ನಾಟಕದ ಯಾರೊಬ್ಬರು ಕೂಡ ಇರಲಿಲ್ಲ ಎನ್ನುತ್ತಾಳೆ ಕನಕಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com