ಬೆಳಗಾವಿ: ಪೊಲೀಸ್ ತನಿಖೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಆರಂಭಿಸುವ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಗುರುವಾರ ವಿಧಾನ ಪರಿಷತ್ ಗೆ ತಿಳಿಸಿದ್ದಾರೆ.
ಬಿಜೆಪಿ ಸದಸ್ಯೆ ತಾರಾ ಅನುರಾಧ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ರಾಜ್ಯ ಸರ್ಕಾರದ ಉದ್ದೇಶಿಸಿತ ಪೊಲೀಸ್ ತನಿಖಾ ವಿಶ್ವವಿದ್ಯಾಲಯ ಅಪರಾಧ, ಸೈಬರ್ ಕ್ರೈಂ ತನಿಖೆಯಲ್ಲಿ ಪೊಲೀಸರು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಹಾಯಕವಾಗಲಿದೆ ಎಂದರು.
ಇದೇ ವೇಳೆ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಉನ್ನತಿಕರಣಕ್ಕಾಗಿ ಗೃಹ ಇಲಾಖೆ 80 ಕೋಟಿ ರುಪಾಯಿ ವೆಚ್ಚ ಮಾಡುತ್ತಿದೆ ಎಂದು ರಾಮಲಿಂಗಾ ರೆಡ್ಡಿ ಅವರು ತಿಳಿಸಿದರು.
ಅಪರಾಧ ಪ್ರಕರಣಗಳ ತನಿಖೆಯಲ್ಲಿ ಪೊಲೀಸರು ಹಳೇ ಸಾಂಪ್ರದಾಯಿಕಲ ವಿಧಾನಗಳನ್ನೇ ಬಳಸುತ್ತಿದ್ದಾರೆ ಎಂದು ತಾರಾ ಅವರು ಹೇಳಿದರು. ಅಲ್ಲದೆ ಪೊಲೀಸ್ ಸಿಬ್ಬಂದಿ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.