ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂದಿನ ವರ್ಷದಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ 'ನೋ ಬ್ಯಾಗ್ ಡೇ': ಶಿಕ್ಷಣ ಇಲಾಖೆ ಚಿಂತನೆ

ರಾಜ್ಯದಾದ್ಯಂತ ಶಾಲಾ ಮಕ್ಕಳಿಗೆ ಸಂತಸದ ಸುದ್ದಿ. ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ (ಡಿಪಿಐ) ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲಾ ಶಾಲೆಗಳಲ್ಲಿ ವಾರಕ್ಕೊಮ್ಮೆ 'ನೋ ಬ್ಯಾಗ್ ಡೇ'....
Published on
ಬೆಂಗಳೂರು: ರಾಜ್ಯದಾದ್ಯಂತ ಶಾಲಾ ಮಕ್ಕಳಿಗೆ ಸಂತಸದ ಸುದ್ದಿ. ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ (ಡಿಪಿಐ) ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲಾ ಶಾಲೆಗಳಲ್ಲಿ ವಾರಕ್ಕೊಮ್ಮೆ 'ನೋ ಬ್ಯಾಗ್ ಡೇ'ಪ್ರಾರಂಭಿಸಲು ನಿರ್ಧರಿಸಿದೆ. ಇದರರ್ಥ ಕಡೆಯ ಪಕ್ಷ ಒಂದು ದಿನದ ಮಟ್ಟಿಗಾದರೂ ಮಕ್ಕಳು ಭಾರೀ ತೂಕದ ಬ್ಯಾಗ್ ಗಳನ್ನು ಶಾಲೆಗೆ ತರುವುದರಿಂದ ಮುಕ್ತರಾಗುತ್ತಾರೆ. ಸಿಬಿಎಸ್ಇ ಮತ್ತು ಐಸಿಎಸ್ಇಗೆ ಸೇರಿದ ಶಾಲೆಗಳಿಗೆ ಸಹ ಈ ನಿಯಮ ಅನ್ವಯಿಸುತ್ತದೆ. ಮಕ್ಕಳ ಶಾಲಾ ಜೀವನವನ್ನು ಸಂತಸದಿಂದ ಕಳೆಯುವಂತೆ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಯಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
"ಬೆಳಗಾವಿ ಅಧಿವೇಶನದ ನಂತರ ನಾವು ಅಧಿಕೃತವಾಗಿ ಆದೇಶ ಹೊರಡಿಸಲಿದ್ದೇವೆ. ರಾಜ್ಯದ ಎಲ್ಲಾ ಶಾಲೆಗಳೂ ಒಂದೇ ದಿನವನ್ನು 'ನೋ ಬ್ಯಾಗ್ ಡೇ' ಯನ್ನಾಗಿ ಆಚರಿಸಬೇಕೆನ್ನುವುದು ನಮ್ಮ ನಿಲುವು. ಬಹುತೇಕ ಸಿಬಿಎಸ್ ಇ ಮತ್ತು ಐಸಿಎಸ್ ಇ ಶಾಲೆಗಳು ಶನಿವಾರದಂದು ರಜೆಯಾಗಿರುವ ಕಾರಣ ಬುಧವಾರದಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಸಲಹೆ ಕೇಳಲಾಗಿದೆ. ಬುಧವಾರದಂದೇ ನೊ ಬ್ಯಾಗ್ ಡೇ ಎಂದಾದ್ದಲ್ಲಿ ವಿದ್ಯಾರ್ಥಿಗಳು ವಾರದ ಮೊದಲ ಹಾಗೂ ಕಡೆಯ ಎರಡು ದಿನಗಳಿಗೆ ಮಾತ್ರ ಬ್ಯಾಗ್ ತರಬೇಕಾಗುತ್ತದೆ." ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದರು.
ಇದಾಗಲೇ  ಕೆಲವು ಖಾಸಗಿ ಹಾಗೂ ಅನುದಾನರಹಿತ ಶಾಲೆಗಳು ತಮ್ಮ ಶಾಲೆಯಲ್ಲಿ ನೊ ಬ್ಯಾಗ್ ಡೇ ಜಾರಿಗೆ ತಂದಿದೆ. ಗದಗ ಜಿಲ್ಲೆಯ ನೀರಾಲಗಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆದ ಮೂರು ವರ್ಷಗಳಿಂದ ಶನಿವಾರದಂದು 'ನೋ ಬ್ಯಾಗ್ ಡೇ' ಅನ್ನು ಜಾರಿಮಾಡಿದೆ. ಬೆಂಗಳೂರಿನ ಬನಶಂಕರಿಯಲ್ಲಿರುವ ಐಸಿಎಸ್ಇ ಶಾಲೆ, ಲಿಟ್ಲ್ ಫ್ಲವರ್ ಪಬ್ಲಿಕ್ ಸ್ಕೂಲ್, 'ನೋ ಬ್ಯಾಗ್ ಡೇ' ನ್ನು 2012ರಿಂದಲೂ ಬುಧವಾರದಂದು ಆಚರಿಸಿಕೊಂಡು ಬರುತ್ತಿದೆ. "ಇದು ನಾವು ಆರು ವರ್ಷಗಳ ಹಿಂದೆ ಮಾಡಿದ ನೂತನ ಪ್ರಯೋಗವಾಗಿದ್ದು ಇದು ಒಂದು ದೊಡ್ಡ ಯಶಸ್ಸು ಕಂಡಿದೆ. ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲದೆ ಶಿಕ್ಷಕರೂ ಇದರಿಂದ ಸಂತಸ ತಾಳಿದ್ದು ಪಠ್ಯಪುಸ್ತಕಗಳು ಇಲ್ಲದೆ ಕಲಿಸುವುದು ಹೇಗೆ ಎಂದು ತಿಳಿಯಲು ಇದು ಸಹಕಾರಿಯಾಗಲಿದೆ ಎನ್ನುತ್ತಾರೆ" ಲಿಟ್ಲ್ ಫ್ಲವರ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಡಾ.ಬಿ.ಗಾಯಿತ್ರಿ ದೇವಿ ಹೇಳಿದರು.
ಬ್ಯಾಗ್ ತೂಕ ಇಳಿಕೆ ಕ್ರಮ ಜಾರಿಯಾಗಿಲ್ಲ
ಶಿಕ್ಷಣ ಇಲಾಖೆಯು ರಾಜ್ಯದ ಶಾಲಾ ಮಕ್ಕಳ ಬ್ಯಾಗ್ ತೂಕದ ಕಡಿತಕ್ಕೆ ಶಿಫಾರಸುಗಳನ್ನು ನೀಡಲು ಪರಿಣಿತ ಸಮಿತಿಯನ್ನು ರಚಿಸಿತ್ತು. ಶಿಕ್ಷಣತಜ್ಞ ಡಾ. ನಿರಂಜನ್-ಅರಾಧ್ಯ ನೇತೃತ್ವದ ಸಮಿತಿಯು ಮೇ 2016 ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ಆದರೆ ಆ ವರದಿಯು ಇನ್ನೂ ಇಲಾಖೆ ಕಡತದಲ್ಲಷ್ಟೇ ಇದ್ದು ಇದರ ಸಂಬಂಧ ಇನ್ನೂ ಸೂಕ್ತ ಕ್ರಮ ಕೈಗೊಂಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com