ಮುಖ್ಯಮಂತ್ರಿಗಳೇ.. ತನ್ವೀರ್ ಸೇಠ್ ಖಾತೆ ಬದಲಿಸಿ: ಸಾಹಿತ್ಯ ಸಮ್ಮೇಳನದಲ್ಲಿ ಚಂಪಾ ಹಕ್ಕೊತ್ತಾಯ

ಮುಖ್ಯಮಂತ್ರಿಗಳೇ ದಯಮಾಡಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಖಾತೆಯನ್ನು ಬದಲಾವಣೆ ಮಾಡಿ ಎಂದು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ....
ಚಂದ್ರಶೇಖರ್ ಪಾಟೀಲ್
ಚಂದ್ರಶೇಖರ್ ಪಾಟೀಲ್
Updated on
ಮೈಸೂರು: ಮುಖ್ಯಮಂತ್ರಿಗಳೇ ದಯಮಾಡಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಖಾತೆಯನ್ನು ಬದಲಾವಣೆ ಮಾಡಿ ಎಂದು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಸಾಹಿತಿ ಪ್ರೊ. ಚಂದ್ರಶೇಖರ್ ಪಾಟೀಲ್ ಅವರು ಶುಕ್ರವಾರ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಕ್ಕೊತ್ತಾಯ ಮಾಡಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಚಂಪಾ ಅವರು, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವಿರ್ ಸೇಠ್‌ ಗೈರಾಗಿರುವುದನ್ನು ಖಂಡಿಸಿದರು. ತನ್ವೀರ್‌ಸೇಠ್‌ ಸರಿಯಿಲ್ಲ, ಇಂದಿನ ಸಾಹಿತ್ಯ ಸಮ್ಮೇಳನಕ್ಕು ಬಂದಿಲ್ಲ, ಅವರ ಖಾತೆಯನ್ನು ಈ ಕೂಡಲೇ ಬದಲಾವಣೆ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿದರು.
'ನನ್ನ ಹಾಡಿನ ಹಳ್ಳ ಎಲ್ಲಿ ಹೊರಳುವದೇನೊ ಗಚ್ಚಿನ ಗಟಾರವನು ಕಟ್ಟಬೇಡ...' ಎಂದು 1960ರಲ್ಲಿಯೇ ಬರೆದಿದ್ದೆ. ನಂತರ ಅದೇ ಲಯ, ಅದೇ ಗತಿ. ನನಗೆ ನಾನೇ ಲಕ್ಷಣ ರೇಖೆ  ಹಾಕಿಕೊಳ್ಳುವುದು ಅದನ್ನೇ ಉಲ್ಲಂಘಿಸುವುದು. ಹೀಗಾಗಿ ನನ್ನ ಸಾಹಿತ್ಯದ ಮೇಲೆ ಯಾವ ಪ್ರಭಾವ, ಯಾರ ಪ್ರಭಾವ ಎಷ್ಟಾಗಿದೆ ಅಂತ ನನಗೇ ಗೊತ್ತಿಲ್ಲ, ವಿಮರ್ಶಕರು ಹೇಳಿದರೆ ಗೊತ್ತಾದೀತೇನೋ
ವ್ಯಕ್ತಿಗಳಿಗೆ ಮಿತಿ ಇರುವಂತೆ ಸಂಸ್ಥೆಗಳಿಗೂ ಮಿತಿ ಇರುತ್ತವೆ. ಏನೂ ಮಾಡಲೂ ಸಾಧ್ಯವಿಲ್ಲ ಮಾಡಲಾರೆ ಎಂಬ ಮನೋಭಾವ ಉಳ್ಳವರಿಗೆ ಈ ಮಿತಿಗಳು ಆಸರೆಯಾಗುತ್ತವೆ. ಆದರೆ ಏನಾದರೂ ಮಾಡಬೇಕು,ಮಾಡುವೆ ಎಂಬ ಛಲವಿದ್ದವರಿಗೆ ಮಿತಿಗಳು ಸವಾಲಾಗುತ್ತದೆ.
ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುವ  ಸಾಹಿತ್ಯ ಸಮ್ಮೇಳನಗಳನ್ನು ಕೆಲವರು ಜಾತ್ರೆ ಎಂದೋ, ಸಂತೆ ಎಂದೋ ಕರೆದು ಮೂಗು ಮುರಿಯುವುದು ಕೂಡ ಒಂದು ಮಾಮೂಲಿ ವಿದ್ಯಮಾನ. ವಿಚಿತ್ರವೆಂದರೆ, ಇಂಥವರು  ಕೂಡಾ ಸಮ್ಮೇಳನದ ಆಮಂತ್ರಣ ಬಂದರೆ ತೆಪ್ಪಗೆ ಬಂದು, ಪ್ರಬಂಧವನ್ನೋ ಕವನವನ್ನೋ ಓದಿ ನಿಯಮಾನುಸಾರ ಟಿ.ಎ.ಡಿ.ಎ ಪಡೆಯುತ್ತಾರೆ.
ಸಂತೆ  ಜಾತ್ರೆ ಅಂತ ಮೂದಲಿಸುವವರೆಲ್ಲ ಸಂತೆಯನ್ನೇ ಸವಿಯದ, ಜಾತ್ರೆಯ ಸಂಭ್ರಮವನ್ನೇ ಅರಿಯದ ನಗರ ಪ್ರಜ್ಞೆಯ ಕೂಪಮಂಡೂಕಗಳು, ಹಳ್ಳಿಗಾಡಿನಿಂದ ಬಂದ ನನ್ನಂಥವರಿಗೆ ಸಾಹಿತ್ಯ ಎಂಬುದು ಕೇವಲ ಕೆಲವು ಶಿಷ್ಟ ಪ್ರಜ್ಞೆ ಗಳ, ಪಾಂಡಿತ್ಯ ಪೂರ್ಣ ಒಣ ಅಭಿಪ್ರಾಯಗಳ ಪಿಸುಮಾತಿನ ಪಕ್ಷಪಾತದ ವಿಮರ್ಶೆಗಳ ಪರಸ್ಪರ ಬೆನ್ನು ಕೆರೆಯುವ ಕ್ಲಬ್ ಸದಸ್ಯರ ಬೌದ್ಧಿಕ  ವ್ಯಾಯಾಮ ಎಂಬುದರಲ್ಲಿ ನಂಬಿಕೆ ಇಲ್ಲ. ಬದಲಾಗಿ ಅದು ನಮ್ಮ ಸಮುದಾಯದ ಅಭಿವ್ಯಕ್ತಿ ಯಾಗಿ ಒಳ್ಳೆಯದರ ಕುರಿತು ಸಂಭ್ರಮಪಡುವ ಹಾಗೂ ಕೆಟ್ಟದರ ಬಗ್ಗೆ ಆರೋಗ್ಯಪೂರ್ಣ ಆತ್ಮ ವಿಮರ್ಶೆಗೆ ಅನುವು ಮಾಡಿಕೊಡುವ ಸಾಂಸ್ಕೃತಿಕ ವಿದ್ಯಮಾನ.
ಕನ್ನಡ ಪ್ರಜ್ಞೆಯೇ ಅಪ್ಪಟ ಜಾತ್ಯತೀತವಾದದು. ಜಾತಿ-ಧರ್ಮಗಳ ಹೆಸರಿನಲ್ಲಿ ಸಮಾವೇಶಗೊಳ್ಳುವುದು ಸಮಾಜದ ವಿಘಟನೆಯ ಸಂಕೇತ. ಆದರೆ ಪ್ರತಿ ವರ್ಷ ಕನ್ನಡದ ಹೆಸರಿನಲ್ಲಿ ಲಕ್ಷಾಂತರ ಜನ ಸೇರಿ ಸಂಭ್ರಮಿಸುವುದು ಕನ್ನಡ ಪ್ರಜ್ಞೆಯನ್ನು ಮತ್ತಷ್ಟು ಗಟ್ಟಿಗೊಳಿಸಿದಂತೆಯೇ. ಆದಿ ಕವಿ ಪಂಪ 'ಮನುಷ್ಯ ಜಾತಿ ತಾನೊಂದೆ ವಲಯಂ' ಎಂದರು. ಇದು ಕನ್ನಡ ಸಾಹಿತ್ಯ ಪರಿಷತ್ತಿನ ಘೋಷವಾಕ್ಯವಾಗಿದೆ. ಕವಿ ರಾಜ ಮಾರ್ಗಕಾರನಂತೂ ಸಹಿಷ್ಣುತೆ ಕುರಿತು ಬಹು ದೊಡ್ಡ ಆದರ್ಶ ಕಟ್ಟಿಕೊಟ್ಟಿದ್ದಾನೆ. ಪರಧರ್ಮ ಸಹಿಷ್ಣುತೆ ಮತ್ತು ಜಾತ್ಯತೀತ ನಿಲುವು ಕನ್ನಡ ಪ್ರಜ್ಞೆಯ ಭಾಗವಾಗಿದ್ದರಿಂದ ಸಹಜವಾಗಿಯೇ ಸಾಮಾಜಿಕ ನ್ಯಾಯ ಪರಿಕಲ್ಪನೆ ಆಚರಣೆಯಲ್ಲಿ ಬಂದಿದೆ ಎಂದರು.
ವಚನ ಚಳುವಳಿ ಅಕ್ಷರಶಃ  ತತ್ವಾಧಾರಿತ ಸಂಘಟನೆ. ಬಸವಣ್ಣನವರದು 'ಇವ ನಮ್ಮವ ಇವ ನಮ್ಮವ' ಎಂದು ಎಲ್ಲರನ್ನು ಒಳಗೊಳ್ಳುವ ಬಹು ದೊಡ್ಡ ಜನಾಂದೋಲನ.... ಈ ಪರಂಪರೆಯ ಮುಂದುವರಿಕೆಯಾಗಿ ಮೈಸೂರು ಸಂಸ್ಥಾನದ ಅರಸರು ರಾಜಶಾಹಿ ವ್ಯವಸ್ಥೆಯಲ್ಲೂ ಜನತಂತ್ರದ ಬೆಳೆ ಬೆಳೆದರು. ಕನ್ನಡ ಸಾಹಿತ್ಯ ಪರಿಷತ್ತಿನಂತಹ ಒಂದು ಸಾಂಸ್ಕೃತಿಕ ಸಂಘನಟನೆ ಹುಟ್ಟು ಹಾಕುವ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಪ್ರಜ್ಞೆ ಮತ್ತಷ್ಟು ಕ್ರಿಯಾಶೀಲವಾಗುವಂತೆ ನೋಡಿಕೊಂಡರು ಎಂದು ಚಂಪಾ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com