ಬೆಂಗಳೂರು: ಆರ್ ಟಿ ನಗರದ ಮೂವರನ್ನು ಅಪಹರಿಸಿ, ಅವರಲ್ಲಿ ಓರ್ವನನ್ನು ಕೊಲೆಗೈದಿದ್ದ 21 ಮಂದಿಯ ಗುಂಪನ್ನು ನಿನ್ನೆ ಪೋಲೀಸರು ಬಂಧಿಸಿದ್ದಾರೆ.
ಗೌರಿಬಿದನೂರು ಸಮೀಪದ ಸಿಗತ್ತೆಹಳ್ಳಿ ಯ ತೋಟದಲ್ಲಿ ಅಪಹರಣಕಾರರು ಮಾರಕಾಸ್ತ್ರಗಳಿಂದ ತಾವು ಅಪಹರಿಸಿದ್ದವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ಅವರಲ್ಲಿ ಒಬ್ಬ ಸತ್ತು ಇನ್ನಿಬ್ಬರಿಗೆ ತೀವ್ರ ಗಾಯಗಳಾಗಿತ್ತು.
ಅಪಹರಣಕಾರರ ತಂಡದ ಕಿಂಗ್ ಪಿನ್ ಎನ್ನಲಾದ ಶಿವಾಜಿನಗರದ ಕುರಿ ಮಾರಾಟಗಾರ ಜುನೈದ್ ಅಹಮ್ಮದ್ ಸೇರಿದಂತೆ ಎಲ್ಲ ಶಂಕಿತರನ್ನು ಗೌರಿಬಿದನೂರು ಪೊಲೀಸರು ಬಂಧಿಸಿದ್ದಾರೆ. ಹಣಕಾಸಿನ ವ್ಯವಹಾರ ವಿವಾದಗಳಿಂದಾಗಿ ಈ ಅಪರಾಧ ಪ್ರಕರಣ ನಡೆದಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಅಪಹರಿಸಲ್ಪಟ್ಟವರಲ್ಲಿ ಜೆ.ಸಿ.ನಗರ ದ ನೂರ್ ಅಹ್ಮದ್ (28), ಎನ್ನುವವರು ಕೊಲೆಯಾಗಿದ್ದಾರೆ. ಅವರ ಸ್ನೇಹಿತರಾದ ಸದ್ದಾಂ ಅಲಿಯಾಸ್ ಮುಬಶಿರ್ ಮತ್ತು ಸಮೇಮ್ ಖಾನ್ ಅಲಿಯಾಸ್ ಕಲಿಯಾಸ್, ತೀವ್ರವಾಗಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇವೇಗೌಡ ರಸ್ತೆಯ ವಿ ಕೇರ್ ಆಸ್ಪತ್ರೆ ಬಳಿ ಅಪಹರಣಾಕಾರರು ಮೂವರನ್ನು ಅಪಹರಿಸಿದ್ದಾರೆ ಎಂದು ಹಿರಿಯ ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೂರು ಸ್ಕಾರ್ಪಿಯೋ ಕಾರುಗಳಲ್ಲಿ ಆಗಮಿಸಿದ ತಂಡವು ಉದ್ದೇಶಿತ ವ್ಯಕ್ತಿಗಳನ್ನು ಬಲವಂತವಾಗಿ ಕಾರಿನಲ್ಲಿ ಹತ್ತಿಸಿಕೊಂಡಿತೆನ್ನಲಾಗಿದೆ. ಓರ್ವ ಪ್ರತ್ಯಕ್ಷದರ್ಶಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಚಾರ ತಿಳಿಸಿದ ತಕ್ಷಣ ಆರ್.ಟಿ.ನಗರ ಮತ್ತು ಜೆ.ಸಿ.ನಗರ ಪೊಲೀಸ್ ಠಾಣೆ ಪೋಲೀಸರು ಕಾರ್ಯಾಚರಣೆಗೆ ಇಳಿದರು. ಅಪಹೃತರಿದ್ದ ಕಾರು ಗೌರಿಬಿದನೂರು ಕಡೆಗೆ ಹೊರಟಿದ್ದ ಮಾಹಿತಿಯನ್ನು ಪೋಲೀಸರು ಸಂಗ್ರಹಿಸಿದ್ದರು.
ಮಾಹಿತಿಯನ್ನು ಆಧರಿಸಿ ಪೋಲೀಸರು ಗೌರಿಬಿದನೂರು ಸಮೀಪದ ತೋಟದ ಮನೆಗೆ ದಾಳಿ ನಡೆಸಿದರು. ಅಲ್ಲಿ ನೂರ್ ಅದಾಗಲೇ ಕೊಲೆಯಾದದ್ದನ್ನು ಕಂಡ ಪೋಲೀಸರು ಇನ್ನಿಬ್ಬರು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ತಪ್ಪಿಸಿಕೊಳ್ಳಲು ಯತ್ನಿಸಿದ್ದ ಜುನೈದ್ ಮತ್ತು ಗ್ಯಾಂಗ್ ನ್ನು ಪೋಲೀಸರು ಬಂಧಿಸಿದರು..
ಹಣಕಾಸು ವಿವಾದದ ಹಿನ್ನೆಲೆ
ಜುನೈದ್ ನೂರ್ ನಿಂದ ಕೆಲವು ಕುರಿಗಳನ್ನು ಖರೀದಿಸಿದ್ದನು ಆದರೆ ಅದಕ್ಕೆ ಹಣ ಪಾವತಿಸಿರಲಿಲ್ಲ . ಇದರಿಂದ ಕೋಪಗೊಂಡಿದ್ದ ನೂರ್ ಮತ್ತು ಅವನ ಸ್ನೇಹಿತರು ಜುನೈದ್ ಮನೆಗೆ ತೆರಳಿ ಅವರ ಕುಟುಂಬದೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಇದರಿಂದ ಕುಪಿತನಾದ ಜುನೈದ್ ನೂರ್ ಮೇಲೆ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದ. ಅದರಂತೆ ನೂರ್ ಗೆ ದೂರವಾಣಿ ಕರೆ ಮಾಡಿದ ಜುನೈದ್ ತಾನು ಕೊಡಬೇಕಾದ ಬಾಕಿ ಹಣವನ್ನು ತರುತ್ತಿದ್ದೇನೆ. ನೀವು ವಿ ಕೇರ್ ಆಸ್ಪತ್ರೆ ಬಳಿ ಬಂದರೆ ಹಣ ನೀಡುತ್ತೇನೆ ಎಂದಿದ್ದನು.
ಅಪಹರಣ ಮಾಹಿತಿ ಪಡೆದ ವಿಶೇಷ ಪೋಲೀಸ್ ತಂಡವು ಅಪಹರಣ ಕಾರರ ಮೊಬೈಲ್ ಫೋನ್ ಗಳನ್ನು ಟ್ರ್ಯಾಪ್ ಮಾಡಿತ್ತಲ್ಲದೆ ಗೌರಿಬಿದನೂರು ಪೊಲೀಸರನ್ನು ಎಚ್ಚರಿಸಿದೆ.
ನಗರದಲ್ಲಿ ಗಸ್ತು ತಿರುಗುತ್ತಿದ್ದ ಪೋಲೀಸ್ ತಂಡ ಕ್ಕೆ ಸ್ಕಾರ್ಪಿಯೋ ಕಾರ್ ಮತ್ತು ಅದರಲ್ಲಿದ್ದ ಐದು ಜನರ ತಂಡ ಸಿಕ್ಕಿದೆ. ಕಾರನ್ನು ತಡೆದು ನಿಲ್ಲಿಸಿದ ಪೋಲೀಸರು ಅಪಹರಣ ಪ್ರಕರಣದ ಕುರಿತಂತೆ ಅವರಿಂದ ಮಾಹಿತಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ವಿವರ ಜತೆಗೆ ಅಪಹೃತರನ್ನಿಟ್ಟ ಜಾಗದ ಕುರುಹನ್ನು ಕಾರು ಚಾಲಕ ಪೋಲೀಸರಿಗೆ ತಿಳಿಸಿದ್ದನು.
ನಂತರ, ಪೊಲೀಸರು ತೋಟದ ಮನೆಯ ಮೇಲೆ ದಾಳಿ ನಡೆಸಿದರು ಮತ್ತು ಗ್ಯಾಂಗ್ ನ್ನು ಬಂಧಿಸಿದರು. ಅಶ್ರಫ್ ಎನ್ನುವವರಿಗೆ ಸೇರಿದ್ದ ಈ ತೋಟದ ಮನೆಯಲ್ಲಿ ಅಪಹರಣಾಕಾರರು ಬೀಡು ಬಿಟ್ಟಿದ್ದರು.
ಜೆ.ಸಿ.ನಗರದಲ್ಲಿ ಮೊಬೈಲ್ ಶಾಪ್ ನಡೆಸುತ್ತಿರುವ ಜಾವೇದ್ ಸುಲ್ತಾನ್ "ನೂರ್ ನನ್ನ ಅಂಗಡಿಯ ನಿಯಮಿತ ಗ್ರಾಹಕನಾಗಿದ್ದರು. ಅವರು ಆಗಾಗ ಸಮಯ ಕಳೆಯಲು ಇಲ್ಲಿ ಬರುತ್ತಿದ್ದರು. ನ್ಯೂಸ್ ಚಾನಲ್ ನಲ್ಲಿ ಅವರ ಚಿತ್ರ ನೋಡಿ ನನಗೆ ಆಘಾತವಾಗಿದೆ" ಎಂದು ಎಕ್ಸ್ ಪ್ರೆಸ್ ನೊಂದಿಗೆ ತಮ್ಮ ಅನುಭವ ಹಂಚಿಕೊಂಡರು.