ವಿಧಾನಮಂಡಲದ ಅಧಿವೇಶನದ ವೇಳೆ ಶಾಸಕರಿಗೂ ಅನ್ನಭಾಗ್ಯ ಯೋಜನೆ!

ವಿಧಾನ ಮಂಡಲದ ಅಧಿವೇಶನದ ವೇಳೆಯಲ್ಲಿ ಉಭಯ ಸದನಗಳ ಕಲಾಪದಲ್ಲಿ ಶಾಸಕರು ಭಾಗವಹಿಸುವಂತೆ ಮಾಡಲು ಎಲ್ಲಾ ಶಾಸಕರಿಗೂ ಉಚಿತ ಊಟದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ವಿಧಾನ ಮಂಡಲದ ಅಧಿವೇಶನದ ವೇಳೆಯಲ್ಲಿ ಉಭಯ ಸದನಗಳ ಕಲಾಪದಲ್ಲಿ ಶಾಸಕರು ಭಾಗವಹಿಸುವಂತೆ ಮಾಡಲು ಎಲ್ಲಾ ಶಾಸಕರಿಗೂ ಉಚಿತ ಊಟದ ವ್ಯವಸ್ಥೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಅಧಿವೇಶನ ನಡೆದಾಗ ಅನೇಕ ಶಾಸಕರು ಕಲಾಪದಲ್ಲಿ ಭಾಗವಹಿಸದೆ ಗೈರಾಗುತ್ತಿದ್ದಾರೆ. ಜೊತೆಗೆ ಬೆಳಗ್ಗಿನ ವೇಳೆ ಭಾಗವಹಿಸುವ ಶಾಸಕರು ಊಟಕ್ಕಾಗಿ ಹೊರಗೆ ತೆರಳಿ ಮಧ್ಯಾಹ್ನದ ನಂತರ ವಾಪಸ್ ಬರುವುದಿಲ್ಲ, ಹೀಗಾಗಿ ಅದನ್ನು ತಡೆಯುವುದಕ್ಕೇ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವಿಧಾನ ಸಭೆ ಸ್ಪೀಕರ್ ಕೆ.ಬಿ ಕೋಳಿವಾಡ ತಿಳಿಸಿದ್ದಾರೆ. ವಿಧಾನಸೌಧದಲ್ಲೇ ಉಚಿತವಾಗಿ, ಪೌಷ್ಟಿಕಾಂಶ ಇರುವ ಉತ್ತಮ ಊಟ ನೀಡಬೇಕು ಎಂಬ ಚಿಂತನೆ ನಡೆದಿದೆ ಎಂದು ಹೇಳಿದರು.
ಶಾಸಕರು ರಾತ್ರಿ ವೇಳೆ ಹೋಟೆಲ್‌, ಪಬ್‌ ಮತ್ತಿತರ ಕಡೆ ಊಟಕ್ಕೆ, ‘ಪಾರ್ಟಿ’ ಮಾಡಲು ಹೋಗುವುದನ್ನು ತಡೆಯಲು ‘ಕಾನ್ಸ್‌ಟಿಟ್ಯೂಷನ್‌ ಕ್ಲಬ್‌’ ಮಾದರಿಯ ಕ್ಲಬ್‌ ನಿರ್ಮಿಸಲಾಗುವುದು. ಮುಖ್ಯಮಂತ್ರಿಯವರ ನಿವಾಸ ‘ಅನುಗ್ರಹ’ದ ಸಮೀಪ ಇರುವ 2.20 ಎಕರೆ ಜಮೀನಿನಲ್ಲಿ ಈ ಕಟ್ಟಡ ತಲೆ ಎತ್ತಲಿದ್ದು, ಮುಂದಿನ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿಯವರು ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು.
ಜನಪ್ರತಿನಿಧಿಗಳು ರಾತ್ರಿ ವೇಳೆ ಊಟಕ್ಕಾಗಿ ಎಲ್ಲೆಂದರಲ್ಲಿ ತೆರಳುವುದು ಅವರ ಗೌರವಕ್ಕೆ ಧಕ್ಕೆ ತರುವಂಥದ್ದಾಗಿದೆ. ಇದನ್ನು ಗಮನಿಸಿ, ಶಾಸಕರ ಖಾಸಗಿತನ ಕಾಪಾಡುವುದಕ್ಕಾಗಿ ಈ ಕ್ಲಬ್‌ ನಿರ್ಮಿಸಲಾಗುತ್ತದೆ. ಜಿಮ್‌, ಈಜುಗೊಳ, ಬ್ಯಾಡ್ಮಿಂಟನ್‌ ಕೋರ್ಟ್‌, ಹೋಟೆಲ್‌, ಸಭಾಂಗಣ ಸೌಲಭ್ಯವನ್ನು ಈ ಕ್ಲಬ್‌ ಒಳಗೊಳ್ಳಲಿದೆ ಎಂದು ಕೋಳಿವಾಡ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com