ಗೌರಿ ಲಂಕೇಶ್ ಹತ್ಯೆ: ಇಬ್ಬರು ಶಂಕಿತ ಹಂತಕರ ಮೂರು ರೇಖಾಚಿತ್ರ ಬಿಡುಗಡೆ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ಪೊಲೀಸ್ ತನಿಖಾ ದಳ ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದೆ.
ಗೌರಿ ಲಂಕೇಶ್
ಗೌರಿ ಲಂಕೇಶ್
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ಪೊಲೀಸ್ ತನಿಖಾ ದಳ ಇಬ್ಬರು ಹಂತಕರ ಮೂರು ರೇಖಾ ಚಿತ್ರ ಬಿಡುಗಡೆಗೊಳಿಸಿದೆ.
ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಸುದ್ದಿಗೋಷ್ಠಿ ನಡೆಸಿ ರೇಖಾಚಿತ್ರ ಬಿಡುಗಡೆ ಮಾಡಿದ್ದಾರೆ. ಕೃತ್ಯಕ್ಕೂ ಮುನ್ನ ಹಂತಕರು ಬೆಂಗಳೂರಿನಲ್ಲಿ ಒಂದು ವಾರ ಅಥವಾ ಒಂದು ತಿಂಗಳ ವರೆಗೂ ತಂಗಿರುವ ಸಾಧ್ಯತೆ ಇದೆ. ಅವರು ತಂಗಿದ್ದ ವೇಳೆ ಸಾರ್ವಜನಿಕರು ನೋಡಿರಬಹುದು. ಹೀಗಾಗಿ ನಾವು ಈಗ ಸಾರ್ವಜನಿಕರ ಸಹಾಯ ಕೇಳುತ್ತಿದ್ದೇವೆ. ಹಂತಕರನ್ನು ನೋಡಿದವರು ಮಾಹಿತಿ ನೀಡಿ ಸಹಕರಿಸಿ ಎಂದು ಸಿಂಗ್ ಕೋರಿಕೊಂಡರು.

ಇಬ್ಬರು ಹಂತಕರ ಮೂರು ರೇಖಾ ಚಿತ್ರವನ್ನು ಬಿಡುಗಡೆಗೊಳಿಸಲಾಗಿದ್ದು, ಒಬ್ಬ ಹಂತಕನ ಎರಡು ರೇಖಾ ಚಿತ್ರ ಬಿಡಿಸಲಾಗಿದೆ.  ಹಂತಕರ ಪತ್ತೆಗೆ ಶ್ರಮಿಸುತ್ತಿರುವುದಾಗಿ ಹೇಳಿದ ಸಿಂಗ್​ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ಎಲ್ಲ ರೀತಿಯಿಂದ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ರೇಖಾಚಿತ್ರದಲ್ಲಿ ವ್ಯಕ್ತಿಯ ಹಣೆ ಮೇಲೆ ತಿಲಕ ಇದೆ ಅನ್ನುವ ಕಾರಣಕ್ಕೆ ಇಂಥವರೇ ಹಂತಕರು ಎಂದು ಹೇಳಲು ಸಾಧ್ಯವಿಲ್ಲ. ತನಿಖೆಯ ದಾರಿ ತಪ್ಪಿಸಲು ಕೂಡ ಹಂತಕರು ತಿಲಕ ಹಚ್ಚಿರುವ ಸಾಧ್ಯತೆ ಇದೆ ಆರೋಪಿಗಳನ್ನು ನಾವು ಯಾವುದೇ ಸಂಘಟನೆಯೊಂದಿಗೆ ಲಿಂಕ್ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಹಂತಕರು ಬೈಕ್ ನಲ್ಲಿ ಬಂದಿದದ್ದರು. ಈ ಬೈಕ್ ಮಾಹಿತಿ ಕಲೆ ಹಾಕಿ ತನಿಖೆ ನಡೆಸಲಾಗುತ್ತಿದೆ. ಹತ್ಯೆಗೆ 7.65 ಎಂ ಎಂ ಕಂಟ್ರಿಮೇಡ್ ಪಿಸ್ತೂಲ್ ಬಳಕೆ ಮಾಡಲಾಗಿದೆ. ಹಂತಕರು 25ರಿಂದ 35 ವರ್ಷ ಮಧ್ಯದವರು. ಈಗಾಗಲೇ 200ರಿಂದ 250 ಜನರನ್ನು ಪ್ರಕರಣ ಸಂಬಂಧ ವಿಚಾರಣೆ ತನಿಖಾ ತಂಡ ನಡೆಸಿದೆ. ನಾವು ಯಾವುದೇ ನಿರ್ದಿಷ್ಟ ಸಂಸ್ಥೆಯನ್ನು ಟಾರ್ಗೆಟ್ ಮಾಡಿ ತನಿಖೆ ನಡೆಸುತ್ತಿಲ್ಲ. ಕೆಲವು ಹಿಂದೂ ಸಂಘಟನೆಗಳ ಹೆಸರು ಕೇಳಿ ಬಂದಿದ್ದೇ ಮಾಧ್ಯಮಗಳ ಮೂಲಕ ಎಂದ ಅವರು ನಾವು ತನಿಖೆಯಲ್ಲಿ ಇಷ್ಟು ಪ್ರಗತಿ ಸಾಧಿಸಲು ಸಾರ್ವಜನಿಕರ ನೆರವು ಬಹು ಮುಖ್ಯ ಪಾತ್ರ ವಹಿಸಿದೆ ಎಂದು ಹೇಳಿದರು
ಗೌರಿ ಲಂಕೇಶ್ ಮನೆ ಬಳಿ ಎರಡು ಬೈಕ್ ನಲ್ಲಿ ಮೂವರು ದುಶ್ಕರ್ಮಿಗಳು ಆಗಮಿಸಿದ್ದಾರೆ, ಇಬ್ಬರು ಒಂದು ಬೈಕ್ ನಲ್ಲಿ, ಮತ್ತೊಬ್ಬ ಇನ್ನೊಂದು ಬೈಕ್ ನಲ್ಲಿದ್ದ, ಮೂವರು ಕೂಡ ಹೆಲ್ಮೆಟ್ ಧರಿಸಿದ್ದರಿಂದ ಅವರು ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಎಸ್ ಐಟಿ ಆಧಿಕಾರಿಗಳು ಹೇಳಿದ್ದಾರೆ.
ಆದರೆ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಶಂಕಿತ ಹಂತಕನ ರೇಖಾ ಚಿತ್ರ ಬಿಡಿಸಿದ್ದಾರೆ, ಮೂವರು ಕಲಾವಿದರ ಸಹಾಯ ಪಡೆದಿರುವ ಪೊಲೀಸರು ಶಂಕಿತ ಹಂತಕನ ಫೋಟೋ ಬಿಡುಗಡೆಗೊಳಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com