ಮೈಸೂರು: ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟ 5 ಆನೆಗಳು, ಗ್ರಾಮಸ್ಥರಲ್ಲಿ ಆತಂಕ

ಕಬ್ಬಿನ ಗದ್ದೆಯಲ್ಲಿ ಐದು ಆನೆಗಳು ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ ಹೆಚ್.ಡಿ ಕೋಟೆ ತಾಲೂಕಿನ ಬಸಾಪುರ ಗ್ರಾಮಸ್ಥರು ಆತಂಕಗೊಂಡಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈಸೂರು: ಕಬ್ಬಿನ ಗದ್ದೆಯಲ್ಲಿ ಐದು ಆನೆಗಳು ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ ಹೆಚ್.ಡಿ ಕೋಟೆ ತಾಲೂಕಿನ ಬಸಾಪುರ ಗ್ರಾಮಸ್ಥರು ಆತಂಕಗೊಂಡಿದ್ದಾರೆ. 
ಬಂಡೀಪುರ  ಅರಣ್ಯದಿಂದ ಈ ಆನೆಗಳು ದಾರಿ ತಪ್ಪಿ ಬಂದಿವೆ ಎಂದು ಹೇಳಲಾಗಿದ್ದು, ನಾಗರಾಜ್ , ಸೌಮ್ಯ ಮತ್ತು ನಾಗಮ್ಮ ಎಂಬುವರಿಗೆ ಸೇರಿದ 3 ಎಕರೆ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿದ್ದು ಕಬ್ಬನ್ನು ಆನೆಗಳು ಹಾಳು ಮಾಡಬಹುದೆಂದು ಜಮೀನು ಮಾಲೀಕರು ಭಯದಲ್ಲಿದ್ದಾರೆ.
ಸೋಮವಾರ ರಾತ್ರಿ ಆನೆಗಳು ಕಬ್ಬಿನ ಗದ್ದೆಗೆ ಬಂದಿದ್ದು, ಆನೆಗಳನ್ನು ಓಡಿಸುವ ಕಾರ್ಯಾಚರಣೆ ವೇಳೆ ಸುಮಾರು 500 ಮಂದಿ ಗ್ರಾಮಸ್ಥರು ಸೇರಿದ ಹಿನ್ನೆಲೆಯಲ್ಲಿ ಅಲ್ಲಿಂದ ಓಡಿಸುವುದು ಕಷ್ಟಕರವಾಗಿದೆ ಎಂದು ಸ್ಥಳೀಯ ಅರಣ್ಯಾಧಿಕಾರಿ ಎಚ್.ಎಂ ಶಿವಕುಮಾರ್ ತಿಳಿಸಿದ್ದಾರೆ.  ಹೆಚ್ಚಿನ ಜನ ಸೇರಿದ ಹಿನ್ನೆಲೆಯಲ್ಲಿ ಆನೆಗಳು ಭಯಗೊಂಡು ಕಬ್ಬಿನ ಗದ್ದೆ ಮದ್ಯೆ ಉಳಿದುಕೊಂಡಿವೆ. ಇಂದಿನ ಸಂಜೆಯೊಳಗೆ ಆನೆಗಳು ವಾಪಸ್ ಹೋಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ನಾಲ್ವರು ವಲಯ ಅರಣ್ಯಾಧಿಕಾರಿಗಳ ಜೊತೆ 80 ಮಂದಿ ಗ್ರಾಮಸ್ಥರು ಗನ್ ಮತ್ತು ಪಟಾಕಿಗಳೊಂದಿಗೆ ಆನೆ ಓಡಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೋಂಡಿದ್ದಾರೆ. ಇನ್ನೂ ಆನೆಗಳಿಂದ ಕಬ್ಬಿನ ಬೆಳೆ ಹಾಳಾಗಿದ್ದು, ಅದಕ್ಕಾಗಿ 15 ದಿನಗಳೊಳಗಾಗಿ ಅರಣ್ಯ ಇಲಾಖೆ ರೈತರಿಗೆ ಪರಿಹಾರ ನೀಡುವುದಾಗಿ ಶಿವಕುಮಾರ್ ತಿಳಿಸಿದ್ದಾರೆ.
ಇನ್ನೂ ಆನೆ ಓಡಿಸುವ ಕಾರ್ಯಾಚರಣೆಯನ್ನು ನೋಡಲು ಗ್ರಾಮಸ್ಥರು ಮರವೇರಿ ಕುಳಿತಿದ್ದರು. ಈ ವೇಳೆ ಮಾರಯ್ಯ ಎಂಬಾತ ಮರದಿಂದ ಕೆಳಗೆ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com