ಉಗ್ರ ಭಟ್ಕಳ್ ಗೆ ಬಹುವಚನ, ಒಡೆಯರ್ ರನ್ನು ಏಕವಚನದಲ್ಲಿ ಸಂಬೋಧಿಸುವ ಮುಖ್ಯಮಂತ್ರಿಗಳನ್ನು ಪಡೆದಿರುವುದು ನಾಡಿನ ದುರ್ದೈವ: ತೇಜಸ್ವಿ ಸೂರ್ಯ

ಯಾಸೀನ್ ಭಟ್ಕಳ್ ನ್ನು ಬಹುವಚನದಲ್ಲಿ ಸಂಬೋಧಿಸಿ, ನಾಡು ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಏಕವಚನದಲ್ಲಿ ಸಂಬೋಧಿಸುವಂತಹ ಮುಖ್ಯಮಂತ್ರಿಗಳನ್ನು ಪಡೆದಿರುವುದು ರಾಜ್ಯದ ದುರ್ದೈವ....
ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ
ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ
ಭಯೋತ್ಪಾದಕ ಯಾಸೀನ್ ಭಟ್ಕಳ್ ನ್ನು ಬಹುವಚನದಲ್ಲಿ ಸಂಬೋಧಿಸಿ, ನಾಡು ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಏಕವಚನದಲ್ಲಿ ಸಂಬೋಧಿಸುವಂತಹ ಮುಖ್ಯಮಂತ್ರಿಗಳನ್ನು ಪಡೆದಿರುವುದು ಕರ್ನಾಟಕದ ದುರ್ದೈವ,  ಕಳೆದ 25 ವರ್ಷದಿಂದ ಕರ್ನಾಟಕದ ಕರಾವಳಿ ಕೋಮು ಸಂಘರ್ಷದ ಕಾರಣದಿಂದ ನರಳುತ್ತಿದೆ. ಇದಕ್ಕೆ ಮುಕ್ತಾಯ ಹಾಡಬೇಕಾದರೆ ಒಂದೇ ಸಮುದಾಯವನ್ನು ಓಲೈಕೆ ಮಾಡದ, ಪಕ್ಷಾತೀತ ಸರ್ಕಾರ ರಾಜ್ಯದಲ್ಲಿ ಬರಬೇಕಿದೆ. ಆ ರೀತಿಯ ನಾಡಿನ ಬಗ್ಗೆ ಕಳಕಳಿ ಇಟ್ಟಿರುವ ಸರ್ಕಾರ ರಚಿಸುವುದಕ್ಕೆ ಮಂಗಳೂರು ಚಲೋ ಮೊದಲ ಹೆಜ್ಜೆ ಎಂದು ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಹೇಳಿದ್ದಾರೆ. 
ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳ ತನಿಖೆಯನ್ನು ಸಿಬಿಗೆ ವಹಿಸಬೇಕು, ಸಚಿವ ರಮಾನಾಥ್ ರೈ ರಾಜೀನಾಮೆ ಪಡೆದು ಕೆಎಫ್ ಡಿ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಯುವ ಮೋರ್ಚ ಮಂಗಳೂರು ಚಲೋ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಂಡಿದೆ. ಶಾಂತಿಗೆ ಧಕ್ಕೆಯಾದ್ರೆ ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆನ್ನಲಾಗುತ್ತಿದೆ. ಈ ನಡುವೆ ಮಂಗಳೂರು ಚಲೋ ಬಗ್ಗೆ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಕನ್ನಡಪ್ರಭ.ಕಾಂ ಗೆ ನೀಡಿರುವ ಸಂದರ್ಶನ ಇಲ್ಲಿದೆ.    
ಮಂಗಳೂರು 'ಚಲೋ' ಬೈಕ್‌ ರ‍್ಯಾಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಅಹಿತಕರ ಘಟನೆಗಳಿಗೆ ದಾರಿ ಮಾಡಿಕೊಡುವ ಅಪಾಯವಿದೆ ಎಂದು ಆಡಳಿತ ಪಕ್ಷದ ಸಚಿವರು ಹೇಳುತ್ತಿದ್ದಾರೆ ಈ ಬಗ್ಗೆ ಏನು ಹೇಳುತ್ತೀರಿ?
ಸಚಿವ ರಮಾನಾಥ್ ರೈ ಅವರು ಹಚ್ಚಿದ ಬೆಂಕಿಯನ್ನು ಆರಿಸುವ ಉದ್ದೇಶದಿಂದ ಮಂಗಳೂರು ಚಲೋ ಹೊರಟಿದೆಯೇ ಹೊರತು ಯಾವ ಹೊಸ ವಿವಾದವನ್ನು ಸೃಷ್ಟಿಸುವುದಕ್ಕಲ್ಲ. ಕಳೆದ 25 ವರ್ಷದಿಂದ ಕರ್ನಾಟಕದ ಕರಾವಳಿ ಕೋಮು ಸಂಘರ್ಷದ ಕಾರಣದಿಂದ ನರಳುತ್ತಿದೆ. ಇದಕ್ಕೆ ಮುಕ್ತಾಯ ಹಾಡಬೇಕಾದರೆ ಒಂದೇ ಸಮುದಾಯವನ್ನು ಓಲೈಕೆ ಮಾಡದ, ಪಕ್ಷಾತೀತ ಸರ್ಕಾರ ರಾಜ್ಯದಲ್ಲಿ ಬರಬೇಕಿದೆ. ಆ ರೀತಿಯ ನಾಡಿನ ಬಗ್ಗೆ ಕಳಕಳಿ ಇಟ್ಟಿರುವ  ಸರ್ಕಾರ ರಚಿಸುವುದಕ್ಕೆ ಮಂಗಳೂರು ಚಲೋ ಮೊದಲ ಹೆಜ್ಜೆ. 
ಬೈಕ್‌ ರ‍್ಯಾಲಿ ನಡೆಸುವ ತೀರ್ಮಾನವನ್ನು ಕೈಬಿಡುವಂತೆ ಬಿಜೆಪಿಗೆ ಸರ್ಕಾರ ಆಗ್ರಹಿಸಿತ್ತಿದೆ, ಮಂಗಳೂರು ಚಲೋ ಪ್ರತಿಭಟನೆಯನ್ನು ತಡೆಯುವ ಪ್ರಯತ್ನವೂ ನಡೆದಿದೆ?
ಸರ್ಕಾರವು ತನ್ನ ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡು ಈ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಕೈ ಹಾಕಿದೆ. ಶಾಂತಿಯುತವಾಗಿ ಮತ್ತು ಕಾನೂನಾತ್ಮಕವಾಗಿ ಸರ್ಕಾರದ ವಿರುದ್ಧ ಪ್ರತಿಭಟಿಸುವುದು ನಮ್ಮ ಸಾಂವಿಧಾನಿಕ ಹಕ್ಕು. ಪೊಲೀಸರಿಂದ ಬೆದರಿಕೆ ಹಾಕುವುದು, ನೋಟೀಸ್ ಗಳನ್ನು ಜಾರುಗೊಳಿಸುವುದು, ನಮ್ಮ ಕಾರ್ಯಕರ್ತರಿಗೆ ವಸತಿ ಕಲ್ಪಿಸಿರುವ ಕಲ್ಯಾಣ ಮಂಟಪಗಳಿಗೆ ನೋಟಿಸ್ ಕಳಿಸುತ್ತಿರುವುದು ಕಾಂಗ್ರೆಸ್ ಪಕ್ಷ ಇನ್ನೂ ತುರ್ತು ಪರಿಸ್ಥಿತಿಯ ಮಾನಸಿಕತೆಯಿಂದ ಹೊರಬಂದಿಲ್ಲವೆಂಬುದನ್ನು ತೋರಿಸುತ್ತದೆಯಷ್ಟೆ. ಬೈಕ್ ರ‍್ಯಾಲಿ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಸರ್ಕಾರ ನಮ್ಮನ್ನು ತಡೆಯುವ ಪ್ರಯತ್ನ ಮಾಡಿದಷ್ಟೂ ಹೋರಾಟದ ತೀವ್ರತೆಯನ್ನು ಹೆಚ್ಚಿಸುತ್ತೇವೆ. 
ಪೋಲೀಸರು ತಡೆದರೆ ನಿಮ್ಮ ಮುಂದಿನ ಹೋರಾಟ ಯಾವ ರೀತಿಯಲ್ಲಿರಲಿದೆ?
ನಮ್ಮ ಹೋರಾಟ ಎಲ್ಲಾ ಸಂದರ್ಭದಲ್ಲೂ ಶಾಂತಿಯುತ, ಕಾನೂನಾತ್ಮಕಾವಾಗಿಯೇ ಇರುತ್ತದೆ. ಬಿಜೆಪಿಯ ಯಾವುದೇ ಹೋರಾಟವೂ ಸಮಾಜದಲ್ಲಿ ಅಶಾಂತಿ ನಿರ್ಮಿಸಿರುವ ಇತಿಹಾಸವಿಲ್ಲ. ಹೀಗಿರುವಾಗ ಪೊಲೀಸರು ಇಂತಹ ಶಾಂತಿಯುತ ಹೋರಾಟವನ್ನು ತಡೆಯುವುದು ಅಸಾಂವಿಧಾನಿಕವಾಗಿರುತ್ತದೆ. ಪೊಲೀಸರು ತಡೆದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಸಹಸ್ರಾರು ಸಂಖ್ಯೆಯಲ್ಲಿ ನಾವು ಮಂಗಳೂರನ್ನು ತಲುಪಿಯೇ ತೀರುತ್ತೇವೆ. ತಾಕತ್ ಇದ್ದರೆ ಮುಖ್ಯಮಂತ್ರಿಗಳು ನಮ್ಮನ್ನು ತಡೆಯಲಿ.
ಬಿಜೆಪಿಗೆ ಚುನಾವಣೆ ಎದುರಿಸಲು ಯಾವುದೇ ವಿಷಯಗಳಿಲ್ಲ. ಆದ್ದರಿಂದ ಈ ರೀತಿಯ ಪ್ರತಿಭಟನೆಗಳನ್ನು ಕೈಗೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ?
ಹಿಂದೂ ಕಾರ್ಯಕರ್ತರ ಸರಣಿ ಕಗ್ಗೊಲೆಗಳೂ ನಮ್ಮ ಚುನಾವಣೆಯ ಮುಖ್ಯ ವಿಷಯ.  ಹಿಂದೂ ಸಂಘಟನೆಗಳಿಗೆ ಕೆಲಸ ಮಾಡುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ 25-26 ವರ್ಷದ ಯುವಕರನ್ನು ಹತ್ಯೆ ಮಾಡುತ್ತಿರುವುದು ಸರಿಯೇ? ಅದರ ವಿರುದ್ಧ ನಾವು ಪ್ರತಿಭಟಿಸಬಾರದೇ? ಈ ಎಲ್ಲಾ ಕೊಲೆಗಳಲ್ಲೂ ಪಾತ್ರ ಇರುವ ಪಿಎಫ್ಐ, ಎಫ್ ಡಿಪಿಐ ಸಂಘಟನೆಗಳನ್ನು ನಿಷೇಧಿಸಿ ಎಂದು ನಾವು ಕೇಳಬಾರದೇ? ದೌರ್ಜನ್ಯ ನಡೆಸುತ್ತಿರುವ ಸಂಘಟನೆಗಳ ಆಟಾಟೋಪಗಳಿಗೆ ಕೃಪಾಷೀರ್ವಾದ ಕೊಡುತ್ತಿರುವ  ಮುಖ್ಯಮಂತ್ರಿಗಳ ಧೋರಣೆ ವಿರುದ್ಧ ಪ್ರತಿಭಟಿಸಬಾರದೇ? ಸಿದ್ದರಾಮಯ್ಯನವರದ್ದು ಕರ್ನಾಟಕ ಕಂಡ ಅತ್ಯಂತ ಹಿಂದೂ ದ್ವೇಷಿ ಸರ್ಕಾರ.  ಇಂತಹ ಮುಖ್ಯಮಂತ್ರಿಗಳು ಮತ್ತೊಮ್ಮೆ ಆಯ್ಕೆಯಾದರೆ ಕರ್ನಾಟಕವೂ ಕೇರಳದಂತೆ ಆಗುವ ದಿನಗಳು ದೂರವಿಲ್ಲ. ನಮ್ಮ ಮುಖ್ಯಮಂತ್ರಿಗಳು ಯಾಸೀನ್ ಭಟ್ಕಳ್ ನಂತಹ ಭಯೋತ್ಪಾದಕನನ್ನು ಬಹುವಚನದಲ್ಲಿ ಸಂಬೋಧಿಸಿ, ನಾಡು ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಏಕವಚನದ್ಲಲಿ ಸಂಬೋಧಿಸುವಂತಹ ಮುಖ್ಯಮಂತ್ರಿಗಳನ್ನು ಪಡೆದಿರುವುದು ನಮ್ಮ ದುರ್ದೈವ. 
ಭ್ರಷ್ಟಾಚಾರ, ದಕ್ಷ ಆಡಳಿತದಲ್ಲಿ ವಿಫಲ್ಯ ಸೇರಿದಂತೆ ರಾಜ್ಯ ಸರ್ಕಾರದ ಇನ್ನಿತರ ವೈಫಲ್ಯಗಳ ವಿರುದ್ಧ ಯಾಕೆ ಬಿಜೆಪಿ ನಾಯಕರ ಹೋರಾಟ ಇಲ್ಲ?
ಈ ಸರ್ಕಾರದಿಂದ ಎಲ್ಲಾ ರೀತಿಯಿಂದಲೂ ರಾಜ್ಯದ ಜನ ಬೇಸರಗೊಂಡಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಇದು ಅತ್ಯಂತ ಭ್ರಷ್ಟ ಸರ್ಕಾರ ಎಂಬ ಹಣೆಪಟ್ಟಿ ಈಗಾಗಲೇ ಈ ಸರ್ಕಾರಕ್ಕೆ ಬಂದಿದೆ. ಕರ್ನಾಟಕವು ತನ್ನ ಇತಿಹಾಸದಲ್ಲೇ ಮಾಡಿರದಷ್ಟು ಸಾಲವನ್ನು ಒಮ್ಮೆಲೆ ಮಾಡಿರುವ ಕೀರ್ತಿ ಈ ಸರ್ಕಾರದ್ದು. ಈ ಎಲ್ಲಾ ವಿಚಾರಗಳನ್ನೂ ಮುಂದಿಟ್ಟುಕೊಂಡು ಬರುವ ದಿನಗಳಲ್ಲಿ ಬಹುದೊಡ್ಡ ಜನಾಂಧೋಲನವನ್ನು ರೂಪಿಸಿ ಈ ಸರ್ಕಾರವನ್ನು ಕಿತ್ತೊಗೆಯುತ್ತೇವೆ. 
ಮಂಗಳೂರು ಚಲೋ ಗೆ ಎಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಲಿದ್ದಾರೆ? ಎಲ್ಲಿಂದ ಪ್ರಾರಂಭ?
12000 ಕ್ಕೂ ಹೆಚ್ಚು ಬೈಕ್ ಗಳು, ಭಾಗವಹಿಸಲಿವೆ ಸುಮಾರು 24-25 ಸಾವಿರ ಯುವಕರು ಭಾಗವಹಿಸಲಿದ್ದಾರೆ. ಸೆ.05 ರಂದು ಬೆಂಗಳೂರು ಮತ್ತು ಹುಬ್ಬಳ್ಳಿಯಿಂದ ಪ್ರಾರಂಭವಾಗುತ್ತದೆ. ಸೆ.-6 ರಂದು ಮೈಸೂರು ಚಿಕ್ಕಮಗಳೂರು, ಶಿವಮೊಗ್ಗದಿಂದ ಪ್ರಾರಂಭವಾಗುತ್ತದೆ. 5 ಕಡೆಯ ರ್ಯಾಲಿಗಳು ಸೆ.07 ರಂದು ಮಧ್ಯಾಹ್ನ 12 ಕ್ಕೆ ಮಂಗಳೂರು ತಲುಪಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ. 
-ಶ್ರೀನಿವಾಸ್ ರಾವ್ 
srinivasrao@newindianexpress.com, srinivas.v4274@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com