83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಚಂಪಾ ಆಯ್ಕೆ

ಮೈಸೂರಿನಲ್ಲಿ ನಡೆಯುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಚಂದ್ರಶೇಖರ ಪಾಟೀಲ ಆಯ್ಕೆ ಆಗಿದ್ದಾರೆ
ಚಂದ್ರಶೇಖರ ಪಾಟೀಲ
ಚಂದ್ರಶೇಖರ ಪಾಟೀಲ
Updated on
ಮೈಸೂರು: ಮೈಸೂರಿನಲ್ಲಿ ನಡೆಯುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಚಂದ್ರಶೇಖರ ಪಾಟೀಲ ಆಯ್ಕೆ ಆಗಿದ್ದಾರೆ.
"ಮೈಸೂರಿನಲ್ಲಿ ನ.24ರಿಂದ 26ರವರೆಗೆ ನಡೆಯುವ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಪ್ರೊ. ಚಂದ್ರಶೇಖರ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ" ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದರು.
ಕನ್ನಡ ನಾಡಿನ ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ಬಹುಮುಖ ವ್ಯಕ್ತಿತ್ವದಿಂದ ಪ್ರಸಿದ್ಧರಾಗಿರುವ ಚಂದ್ರಶೇಕರ ಪಾಟೀಲ ಹುಟ್ಟಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ 1939 ಜೂನ್‌ 18ರಂದು. ತಂದೆ ಬಸವರಾಜ ಹಿರೇಗೌಡರು, ತಾಯಿ ಮುರಿಗೆವ್ವ. ಚಂದ್ರಶೇಖರ ಪಾಟೀಲರು ಸಾಹಿತ್ಯ ಲೋಕದಲ್ಲಿ ಚಂಪಾ ಎಂಬ ಹೆಸರಿನಿಂದ ಪ್ರಖ್ಯಾತರು. 
ಹೊಂಗನಸ ಹಡಗು, ನಾಳಿಗಿದೋ ಸ್ವಾಗತ, ಚರಿಪನಾದವೊ ಹಾಡು ಹಕ್ಕಿಯೋ ಮುಂತಾದ ಕವನ ಸಂಕಲನಗಳು, ಕೊಡೆಗಳು, ಅಪ್ಪ, ಕುಂಟ ಕುಂಟ ಕುರುವತ್ತಿ, ಗುರ್ತಿನವರು, ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ, ಗೋಕರ್ಣದ ಗೌಡಸಾನಿ, ಜಗದಂಬೆಯ ಬೀದಿನಾಟಕ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ
ಸಂಕ್ರಮಣ ಕಾವ್ಯ, ಗಾಂಧಿ ಗಾಂಧಿ, ಜೂನ್‌ ೭೫-ಮಾರ್ಚ್ ೭೭, ಬಂಡಾಯ ಮತ್ತು ಸಾಹಿತ್ಯ, ನೆಲ್ಸನ್‌ಮಂಡೇಲಾ, ಕನ್ನಡನಾಡಿಗೊಂದು ಪ್ರಾದೇಶಿಕ ಪಕ್ಷ, ಸಂಕ್ರಮಣ ಸಾಹಿತ್ಯ (೩ ಸಂಪುಟಗಳಲ್ಲಿ), ಗಾಂಧಿ ಎನ್ನುವ ಹೆಸರು ಮುಂತಾದವುಗಳು ಚಂಪಾ ಅವರ ಸಂಪಾದಿತ ಕೃತಿಗಳು.  ಬೇಂದ್ರೆ-ನಾ ಕಂಡಂತೆ, ನನಗೆ ಕಂಡಷ್ಟು, ೨೬ ದಿನ ೨೫ ರಾತ್ರಿ, ಕನ್ನಡ ಕನ್ನಡ ಬರ್ರಿ‍ ನಮ್ಮ ಸಂಗಡ ಮತ್ತು ಇಂಗ್ಲಿಷ್‌ನಲ್ಲಿ ರಚಿಸಿದ ಕೃತಿ AT THE OTHER END ಇವರ ಇತರೆ ಕೃತಿಗಳಾಗಿವೆ.
ಪೂರ್ಣರೂಪದ ಸಾಹಿತ್ಯ ಪತ್ರಿಕೆಯೊಂದರ ಅವಶ್ಯಕತೆಯನ್ನು ಮನಗಂಡ ಚಂದ್ರಶೇಖರ ಪಾಟೀಲರು ಸಮಾನ ಮನಸ್ಕರೊಡನೆ ಸಮಾಲೋಚಿಸಿ ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ, ಇವರುಗಳೊಡನೆ ಸೇರಿ 1964ರಲ್ಲಿ ಪ್ರಾರಂಭಿಸಿದ ಪತ್ರಿಕೆ ‘ಸಂಕ್ರಮಣ’. ಈ ಪತ್ರಿಕೆಯು ನವ್ಯದ ಉಚ್ಛ್ರಾಯ ಸ್ಥಿತಿಯಲ್ಲಿ ಪ್ರಾರಂಭವಾಗಿದ್ದು ಎಪ್ಪತ್ತರ ದಶಕದ ನಂತರ ದಲಿತ, ಬಂಡಾಯ ಸಾಹಿತ್ಯ ಚಳವಳಿ ಮುಂತಾದವುಗಳನ್ನು ಒಳಗೊಂಡು ಹಲವಾರು ಯುವ ಬರಹಗಾರರಿಗೆ ವೇದಿಕೆ ಕಲ್ಪಿಸುತ್ತಾ ಬಂದಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಚಂಪಾ ಕನ್ನಡ ಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ.
ಪಾಟೀಲರ ಸಾಹಿತ್ಯ್ ಕ್ಷೇತ್ರದ ಕೊಡುಗೆಗಾಗಿ ಅವರಿಗೆ ಬಂದಿರುವ ಪ್ರಶಸ್ತಿ ಗೌರವಗಳು ಹಲವಾರು. ಅದರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ವಿ. ಶಂಕರಗೌಡ ರಂಗಭೂಮಿ ಪ್ರಶಸ್ತಿ, ಸಂದೇಶ್‌ ಮಾಧ್ಯಮ ಪ್ರಶಸ್ತಿ, ಕರುನಾಡ ಭೂಷಣ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಗಳು ಮುಖ್ಯವಾಗಿದೆ.
ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆ ಖಂಡಿಸಿದ್ದ ಪ್ರೊ. ಚಂದ್ರಶೇಖರ ಪಾಟೀಲ ಅವರು, 2009ನೇ ಸಾಲಿನ ಪಂಪ ಪ್ರಶಸ್ತಿಯನ್ನು 2015ರಲ್ಲಿ ಸರ್ಕಾರಕ್ಕೆ ಹಿಂದಿರುಗಿಸಿದ್ದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com