ಕಲಬುರ್ಗಿ: ನಮ್ಮ ವಾಹನ ಚಾಲಕನ ಜೊತೆ ಹಲವರು ಸೇರಿ ರಸ್ತೆ ಅಪಘಾತದ ಮೂಲಕ ನನ್ನ ಕೊಲೆಗೆ ಸಂಚು ರೂಪಿಸಿದ್ದರು ಎಂದು ಮಾಜಿ ಸಚಿವ ರೇವು ನಾಯಕ ಬೆಳಮಗಿ ಇಂದು ಆರೋಪಿಸಿದ್ದಾರೆ.
ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.
ಅಂದು ನಡೆದ ಅಪಘಾತದ ಬಗ್ಗೆ ಹಲವು ಅನುಮಾನಗಳಿವೆ, ಘಟನೆ ನಂತರ ಕಾರು ಚಾಲಕ ವಿನಯ್ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಪಕ್ಷದ ಹೈಕಮಾಂಡ್‍ಗೆ ದೂರು ನೀಡುತ್ತೇನೆ. ಹೈಕಮಾಂಡ್ ಸೂಚನೆಯಂತೆ ಮುಂದಿನ ಕಾನೂನು ಹೋರಾಟ ನಡೆಸುತ್ತೇನೆ ಎಂದು ರೇವು ನಾಯಕ ಕಲಬುರ್ಗಿಯಲ್ಲಿ ಸುದ್ದಿಗಾರರಿಗೆ ಹೇಳಿದ್ದಾರೆ.
ಮೇ 20 ರಂದು ರೇವು ನಾಯಕ ಅಳಂದದಿಂದ ಹಿಂತಿರುಗುತ್ತಿರುವಾಗ ಆಳಂದ ತಾಲ್ಲೂಕಿನ ಚಿಂಚನಸೂರ ಗ್ರಾಮದ ಬಳಿ ಅವರ ಇನೋವಾ ಕಾರು ಸೇತುವೆಗೆ ಡಿಕ್ಕಿಯಾಗಿ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ರೇವು ನಾಯಕ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಅಪಘಾತ ನಡೆಸಿದ ಕಾರು ಚಾಲಕ ಪರಾರಿಯಾಗಿದ್ದ.
ಅಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪೋಲೀಸರು ಅಪಘಾತ ನಡೆದ ಸ್ಥಳ ದಲ್ಲಿ ಕಾರು ಅಪಘಾತವಾಗುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಸಂಶಯ ವ್ಯಕ್ತಪಡಿಸಿದ್ದರು.
ರೇವು ನಾಯಕ ಅವರ ಹೇಳಿಕೆಯಿಂದ ಮೀಸಲು ಕ್ಷೇತ್ರದ ಟಿಕೇಟ್‌ಗಾಗಿ ಈ ಕೊಲೆ ಯತ್ನ ನಡೆದಿರಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ. ಪ್ರಕರಣದ ತನಿಖೆಯನ್ನು ಪೋಲೀಸರು ಮುಂದುವರೆಸಿದ್ದಾರೆ.