ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉಡುಪಿ: ತೀರ್ಪು ಪ್ರಕಟವಾಗುತ್ತಿದ್ದಂತೆ ಸರ್ಕಾರಿ ಅಭಿಯೋಜಕರ ಮೇಲೆ ಶೂ ಎಸೆದ ಅತ್ಯಾಚಾರಿ

ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬ ಉಡುಪಿ ಕೋರ್ಟ್ ತನ್ನ ವಿರುದ್ಧ 20 ವರ್ಷ ಜೈಲು ಶಿಕ್ಷೆ....
ಉಡುಪಿ: ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬ ಉಡುಪಿ ಕೋರ್ಟ್ ತನ್ನ ವಿರುದ್ಧ 20 ವರ್ಷ ಜೈಲು ಶಿಕ್ಷೆ ಪ್ರಕಟಿಸುತ್ತಿದ್ದಂತೆ ನ್ಯಾಯಾಧೀಶರ ಸಮ್ಮುಖದಲ್ಲಿಯೇ ಸರ್ಕಾರಿ ಅಭಿಯೋಜಕರ ಮೇಲೆ ಶೂ ಎಸೆದ ಕಳವಳಕಾರಿ ಘಟನೆ ನಡೆದಿದೆ.
ಐದು ವರ್ಷಗಳ ಹಿಂದೆ ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಬ್ರಹ್ಮಾವರದ ಪ್ರಶಾಂತ ಕುಲಾಲ್ ಗೆ ಉಡುಪಿ ಜಿಲ್ಲಾ ವಿಶೇಷ ಪೋಕ್ಸೊ ನ್ಯಾಯಾಲಯ 20 ವರ್ಷ ಜೈಲುಶಿಕ್ಷೆ ಹಾಗೂ 25 ಸಾವಿರ ರುಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ನ್ಯಾಯಾಧೀಶರು ತೀರ್ಪು ಪ್ರಕಟಿಸುವ ಮೊದಲು ವಿಶೇಷ ಸರ್ಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ಅವರು, ಪ್ರಕರಣದ ಆರೋಪಿ ವಿರುದ್ಧ ಕೊಲೆ ಸೇರಿದಂತೆ ಇತರ ಹಲವು ಪ್ರಕರಣಗಳಿರುವುದರಿಂದ ಆತನಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ವಿಧಿಸಬೇಕು ಎಂದು ವಾದಿಸಿದ್ದರು. 
ತೀರ್ಪು ಪ್ರಕಟವಾಗುತ್ತಿದ್ದಂತೆ ಕೋಪಗೊಂಡ ಪ್ರಶಾಂತ್ ತನ್ನ ಎರಡೂ ಕಾಲುಗಳ ಶೂ ತೆಗೆದು ನ್ಯಾಯಾಧೀಶರ ಸಮ್ಮುಖದಲ್ಲಿಯೇ ವಿಶೇಷ ಸರ್ಕಾರಿ ಅಭಿಯೋಜಕ ವಿಜಯ್ ವಾಸು ಪೂಜಾರಿಯತ್ತ ಎಸೆದಿದ್ದಾನೆ. ಅದೃಷ್ಟವಶಾತ್ ಅವರು ಏಟಿನಿಂದ ತಪ್ಪಿಸಿಕೊಂಡಿದ್ದಾರೆ.
ಘಟನೆ ಬಳಿಕ, ಇದು ನನ್ನ ಮೇಲೆ ನಡೆದ ದಾಳಿ ಅಲ್ಲ. ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನಡೆದ ದಾಳಿ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪೂಜಾರಿ ಅವರು ಕೋರ್ಟ್ ಮನವಿ ಮಾಡಿದರು. ಅವರ ಮನವಿ ಪರಿಗಣಿಸಿದ ಕೋರ್ಟ್, ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com