ಶಾಂತಿನಗರ: ಜೆಡಿಸ್ ಅಭ್ಯರ್ಥಿ ಮನೆಗೆ ಮಚ್ಚು ಹಿಡಿದು ಬಂದ ವ್ಯಕ್ತಿ ಬಂಧನ

ಶಾಂತಿನಗರ ಜೆಡಿಎಸ್‌ ಅಭ್ಯರ್ಥಿ ಮನೆ ಎದುರು ಮಚ್ಚು ಹಿಡಿದು ಸುತ್ತಾಡುತ್ತಿದ್ದ ವ್ಯಕ್ತಿಯನ್ನು ಜೆಡಿಎಸ್‌ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಶಾಂತಿನಗರ ಜೆಡಿಎಸ್‌ ಅಭ್ಯರ್ಥಿ ಮನೆ ಎದುರು ಮಚ್ಚು ಹಿಡಿದು ಸುತ್ತಾಡುತ್ತಿದ್ದ ವ್ಯಕ್ತಿಯನ್ನು ಜೆಡಿಎಸ್‌ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 
ಆರೋಪಿಯ ದ್ವಿಚಕ್ರ ವಾಹನದಲ್ಲಿ ಎಳನೀರು ಕೊಚ್ಚುವ ಮಚ್ಚು ಇದ್ದುದರಿಂದ ಈತನ ಮೇಲೆ ಅನುಮಾನಪಟ್ಟ ಕಾರ್ಯಕರ್ತರು ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದು, ನಂತರ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ನೀಲಸಂದ್ರದ ನಿವಾಸಿ ಮಜಾರ್‌ ಖಾನ್‌ (28) ಬಂಧಿತ ಆರೋಪಿ., ತನ್ನ ಹಳೇ ದ್ವಿಚಕ್ರ ವಾಹನದಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಶ್ರೀಧರ್‌ರೆಡ್ಡಿ ಅವರ ಮನೆ ಬಳಿ ಬಂದು 'ರೆಡ್ಡಿ ಅವರು ಎಷ್ಟೊತ್ತಿಗೆ ಬರುತ್ತಾರೆ' ಎಂದು ಪದೇ ಪದೇ ಕೇಳುತ್ತಿದ್ದ. ಅನುಮಾನಗೊಂಡ ಜೆಡಿಎಸ್‌ ಕಾರ್ಯಕರ್ತರು ಆತನನ್ನು ಹಿಡಿದು ದ್ವಿಚಕ್ರ ವಾಹನ ಪರಿಶೀಲಿಸಿದಾಗ ಅದರಲ್ಲಿ ಎಳನೀರು ಕೊಚ್ಚುವ ಮಚ್ಚು ಇತ್ತು. 
ಇದರಿಂದ ಆತಂಕಗೊಂಡ ಕಾರ್ಯಕರ್ತರು ಈತನನ್ನು ಹಿಡಿದು ಅಶೋಕ್‌ನಗರ ಠಾಣೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮಜಾರ್‌ನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಆತ ಹಣ ಕೇಳಲು ಬಂದಿದ್ದ ಎನ್ನುವುದು ವಿಚಾರಣೆ ವೇಳೆ ಗೊತ್ತಾಗಿದೆ. ಮಾರಕಾಸ್ತ್ರ ಇಟ್ಟುಕೊಂಡಿದ್ದ ಆರೋಪದ ಮೇಲೆ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. 
ತನ್ನ ತಾತನ ಹೃದಯ ಶಸ್ತ್ರ ಚಿಕಿತ್ಸೆಗಾಗಿ ಹಣಕಾಸಿನ ನೆರವು ಕೋರಲು ಆತ ಬಂದಿದ್ದ ಎನ್ನಲಾಗಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಆರೋಪಿ ತನ್ನ ಆತ್ಮರಕ್ಷಣೆಗೆಂದು ಮಚ್ಚನ್ನು ಜತೆಯಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಪಾಲಿಕೆ ಮಾಜಿ ಸದಸ್ಯ ದಿವಾನ್‌ ಅಲಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಬರ್ಖತ್‌ ಅಲಿಗೂ ಮಜಾರ್‌ ಖಾನ್‌ಗೂ ವೈಯಕ್ತಿಕ ಕಾರಣಕ್ಕೆ ದ್ವೇಷ ಇದೆ. ಈ ಕಾರಣಕ್ಕೇ ಮಜಾರ್‌ ತನ್ನ ಬಳಿ ಮಚ್ಚು ಇಟ್ಟುಕೊಂಡು ಓಡಾಡುತ್ತಾನೆ ಎಂದು ಮನೆಯವರು ಹಾಗೂ ಸ್ಥಳೀಯರು ಮಾಹಿತಿ ನೀಡಿದ್ದಾರೆ. 
ಚುನಾವಣೆ ವೇಳೆಯಲ್ಲಿ ಮಚ್ಚನ್ನು ಜತೆಯಲ್ಲಿಟ್ಟುಕೊಂಡು ಓಡಾಡುತ್ತಿದ್ದುದರಿಂದ ಅಕ್ರಮವಾಗಿ ಮಾರಕಾಸ್ತ್ರ ಇಟ್ಟುಕೊಂಡು ಓಡಾಡುತ್ತಿದ್ದ ಆರೋಪದ ಮೇಲೆ ಕೇಸು ದಾಖಲಿಸಿ ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com