ಪ್ರಧಾನಿ ನರೇಂದ್ರ ಮೋದಿ ಕೃಷ್ಣ ಮಠ ಭೇಟಿ ಅಂತಿಮವಾಗಿಲ್ಲ

ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರಮೋದಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೃಷ್ಣಮಠಕ್ಕೆ ಭೇಟಿ ನೀಡುವ ಬಗ್ಗೆ ಇನ್ನೂ ಅಂತಿಮಗೊಂಡಿಲ್ಲ.
ಪ್ರಧಾನಿ ನರೇಂದ್ರಮೋದಿ
ಪ್ರಧಾನಿ ನರೇಂದ್ರಮೋದಿ

ಉಡುಪಿ : ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರಮೋದಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೃಷ್ಣಮಠಕ್ಕೆ ಭೇಟಿ ನೀಡುವ ಬಗ್ಗೆ ಇನ್ನೂ ಅಂತಿಮಗೊಂಡಿಲ್ಲ. ಪ್ರಧಾನಿ ಭೇಟಿಯಿಂದಾಗಿ 22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಬಹುದೆಂಬ ಲೆಕ್ಕಾಚಾರ  ಜಿಲ್ಲಾ ಬಿಜೆಪಿ ನಾಯಕರದ್ದಾಗಿದೆ.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿಯಲ್ಲಿದ್ದರೂ ಕೃಷ್ಣಮಠಕ್ಕೆ ಭೇಟಿ ನೀಡಿರಲಿಲ್ಲ. ಕನಕ ಗೋಪುರ ಧ್ವಂಸಕ್ಕೆ ಸಂಬಂಧಿಸಿದಂತೆ ಮಠ ಹಾಗೂ ಕುರುಬ ಸಮುದಾಯದ ನಡುವಿನ ಭಿನ್ನಾಭಿಪ್ರಾಯದ ಕಾರಣ ಉಡುಪಿ ಮಠಕ್ಕೆ ಸಿದ್ದರಾಮಯ್ಯ ಭೇಟಿ ನೀಡುತ್ತಿರಲಿಲ್ಲ.

 ಕಳೆದ ವರ್ಷ ಜೂನ್ ತಿಂಗಳಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉಡುಪಿ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಸಿದ್ದರಾಮಯ್ಯ ಇನ್ನಿತರ ಕಾರ್ಯಕ್ರಮದ ಕಾರಣ ನೀಡಿ ಮಠಕ್ಕೆ ಭೇಟಿ ನೀಡಿರಲಿಲ್ಲ.

ಕೆಲ ಪ್ರಗತಿಪರ ಒತ್ತಡದಿಂದಾಗಿ ಸಿಎಂ ಸಿದ್ದರಾಮಯ್ಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ ಎಂದು ಕಳೆದ ವರ್ಷದ ನವೆಂಬರ್ ನಲ್ಲಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಹೇಳಿದ್ದರು. 800 ವರ್ಷ ಇತಿಹಾಸವುಳ್ಳ ಶ್ರೀ ಕೃಷ್ಣ ಮಠಕ್ಕೆ ಉದ್ದೇಶಪೂರ್ವಕವಾಗಿ ಭೇಟಿ ನೀಡುತ್ತಿಲ್ಲ ಎಂಬ ಟೀಕೆಯನ್ನು ಸಿದ್ದರಾಮಯ್ಯ ನಿರಾಕರಿಸಿದ್ದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದಿದ್ದಕ್ಕೆ  ಕಾಂಗ್ರೆಸ್  ಹಿಂದೂ ಧರ್ಮದ ಮಠಗಳಿಂದ ದೂರು ಉಳಿಯುತ್ತಿದೆ ಎಂದು ಸ್ಥಳೀಯ ಬಿಜೆಪಿ ನಾಯಕರು ಟೀಕಿಸಿದ್ದರು.

ಮೋದಿ ಭೇಟಿ ಇನ್ನೂ ಅಂತಿಮಗೊಂಡಿಲ್ಲದಿದ್ದಲೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬಾರ್ಗಿ ಹಾಗೂ ಪಶ್ಚಿವ ವಲಯ ಐಜಿಪಿ  ಅರುಣ್ ಚಕ್ರವರ್ತಿ ಮತ್ತಿತರ ಹಿರಿಯ ಅಧಿಕಾರಿಗಳು ಮೂರು ದಿನಗಳ ಹಿಂದೆಯೇ ಮಠಕ್ಕೆ ಭೇಟಿ ನೀಡಿದ್ದು, ಮೇ 1 ರಂದು 12 ಗಂಟೆ ನಂತರ ಭಕ್ತಾಧಿಗಳ ಪ್ರವೇಶ ನಿರ್ಬಂಧಿಸುವಂತೆ ದೇವಾಲಯದ ಆಡಳಿತ ಮಂಡಳಿಗೆ  ಹೇಳಿದ್ದಾರೆ  ಎಂದು ಮೂಲಗಳಿಂದ ತಿಳಿದುಬಂದಿದೆ.

ಮೇ 1 ರಂದು ಮಧ್ಯಾಹ್ನ 2-50ಕ್ಕೆ ಉಡುಪಿ ಹೆಲಿಪ್ಯಾಡಿನಲ್ಲಿ ಮೋದಿ ಬಂದಿಳಿಯಲಿದ್ದು, ಎಂಜಿಎಂ ಮೈದಾನಕ್ಕೆ ತೆರಳಿ ಬಿಜೆಪಿ ಚುನಾವಣಾ ಸಮಾವೇಶದಲ್ಲಿ  ಪಾಲ್ಗೊಳ್ಳಲಿದ್ದಾರೆ. ಪ್ರವಾಸದ ಸಂದರ್ಭದಲ್ಲಿ ಶ್ರೀ ಕೃಷ್ಣ ಮಠಕ್ಕೂ ಭೇಟಿ ನೀಡುವ ವಿಶ್ವಾಸವಿದೆ ಎಂದು ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ  ಎಂ. ರತ್ನಕರ್ ಹೆಗ್ಡೆ ತಿಳಿಸಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com