ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ಯಮಿಗಳಿಗೆ ಮನವಿ: ಸಿಎಂ ಕುಮಾರಸ್ವಾಮಿ

ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ರಾಜ್ಯದ ಎರಡನೇ ದರ್ಜೆಯ ನಗರಗಳಲ್ಲಿ ಉದ್ಯಮ ಆರಂಭಿಸಲು ....
ಬೆಂಗಳೂರಿನಲ್ಲಿ ಜರುಗಲಿರುವ ಟೆಕ್ ಶೃಂಗ ಸಭೆಯ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಸಚಿವರು ಮತ್ತು ಉದ್ಯಮಿಗಳು.
ಬೆಂಗಳೂರಿನಲ್ಲಿ ಜರುಗಲಿರುವ ಟೆಕ್ ಶೃಂಗ ಸಭೆಯ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಸಚಿವರು ಮತ್ತು ಉದ್ಯಮಿಗಳು.

ಬೆಂಗಳೂರು: ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ರಾಜ್ಯದ ಎರಡನೇ ದರ್ಜೆಯ ನಗರಗಳಲ್ಲಿ ಉದ್ಯಮ ಆರಂಭಿಸಲು ಬಂಡವಾಳ ಹೂಡಿಕೆಗೆ ಕೈಗಾರಿಕೋದ್ಯಮಿಗಳನ್ನು ಮನವಿ ಮಾಡಿದ್ದು ಅವರು ಒಲವು ತೋರಿಸಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳ ಮತ್ತು ಕಾರ್ಪೊರೇಟ್ ದಿಗ್ಗಜರ ಸಲಹೆ ಪಡೆದು ಅವರನ್ನು ಬಂಡವಾಳ ಹೂಡಿಕೆಗೆ ಪ್ರೋತ್ಸಾಹಿಸಲು ಸರ್ಕಾರ ಹೆಚ್ಚು ಒತ್ತು ನೀಡುತ್ತದೆ. ಮುಂದಿನ ದಿನಗಳಲ್ಲಿ ಉದ್ಯಮಿಗಳು ದೊಡ್ಡ ಮಟ್ಟದ ಉದ್ಯಮಗಳನ್ನು ಆರಂಭಿಸಲು ಮತ್ತು ಕೈಗಾರಿಕೆಗಳನ್ನು ಸ್ಥಾಪಿಸಲು ಪೂರಕ ವಾತಾವರಣವನ್ನು ಸರ್ಕಾರ ಒದಗಿಸಿಕೊಡುವುದಾಗಿ ಸಭೆಯ ವೇಳೆ ಭರವಸೆ ನೀಡಿದ್ದೇವೆ. ಈ ಮೂಲಕ ರಾಜ್ಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಈಗಾಗಲೇ ಆಯವ್ಯಯದಲ್ಲಿ ಟಯರ್ 2 ಸಿಟಿಗಳಲ್ಲಿ ಉದ್ಯಮ ಪ್ರಾರಂಭಕ್ಕೆ ಬೇಕಾದ ಪೂರಕ ವಾತಾವರಣವನ್ನು ನಿರ್ಮಿಸಿಕೊಡಲು ಸರ್ಕಾರ ಒತ್ತು ನೀಡಿದೆ. ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿ, ಕೊಪ್ಪಳ ಮೊದಲಾದ ಕಡೆಗಳಲ್ಲಿ ಮತ್ತು ಹೈದರಾಬಾದ್ -ಕರ್ನಾಟಕ ಭಾಗಗಳಲ್ಲಿ ಉದ್ಯಮ ಪ್ರಾರಂಭಕ್ಕೆ ಮತ್ತು ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಉದ್ಯಮಿಗಳಲ್ಲಿ ಕೇಳಿಕೊಂಡಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ವೇಳೆ ಸಂಚಾರ ನಿಷೇಧ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿದೆ. ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಿರುವಾಗ ಸುಮ್ಮನೆ ಏಕೆ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದು ಕೂಡ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com