ವಾಟ್ಸಾಪ್ ಸ್ಟೇಟಸ್ ನಿಂದ ಪೊಲೀಸರ ಬಲೆಗೆ ಬಿದ್ದ ಮಹಿಳೆ

ಮಾಲಿಕರ ಮನೆಯಲ್ಲಿ ಕಳ್ಳತನ ಮಾಡಿ ಅಮಾಯಕಳಂತೆ ವರ್ತಿಸಿದ 26 ವರ್ಷದ ಮಹಿಳೆಯನ್ನು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಾಲಿಕರ ಮನೆಯಲ್ಲಿ ಕಳ್ಳತನ ಮಾಡಿ ಅಮಾಯಕಳಂತೆ ವರ್ತಿಸಿದ 26 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ ಘಟನೆ ನಗರದಲ್ಲಿ ನಡೆದಿದೆ.  ಆಕೆ ಸಿಕ್ಕಿಬೀಳಲು ಕಾರಣವಾಗಿದ್ದು ಚಿನ್ನದ ಆಭರಣ ಧರಿಸಿ ವಾಟ್ಸಾಪ್ ನಲ್ಲಿ ಕಳುಹಿಸಿದ ಫೋಟೋ.

ಶ್ರೀರಾಮಪುರ ಪೊಲೀಸರು ಆಕೆಯನ್ನು ಬಂಧಿಸಿ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಡಲಪಾಳ್ಯದ ನಿವಾಸಿ ಕವಿತಾ ಬಾಯಿ ಆರೋಪಿಯಾಗಿದ್ದಾಳೆ.

ಖಾಸಗಿ ಕಂಪೆನಿಯ ನಿವೃತ್ತ ನೌಕರ ಸತ್ಯನಾರಾಯಣ ರಾವ್ ಶ್ರೀರಾಂಪುರದ ನಿವಾಸಿಯಾಗಿದ್ದಾರೆ. ಇವರು ತಮ್ಮ ಅನಾರೋಗ್ಯ ಪತ್ನಿಯನ್ನು ನೋಡಿಕೊಳ್ಳಲು ಕೆಲ ತಿಂಗಳ ಹಿಂದೆ ಕವಿತಾಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ಮನೆಯೊಳಗೆ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಎಲ್ಲಿ ಇಡುತ್ತಾರೆ ಎಂದು ನೋಡಿಕೊಂಡಿದ್ದಳು. ಒಂದು ದಿನ ಮನೆಯ ಮುಖ್ಯ ಕೀಲಿಯನ್ನು ಕದ್ದುಕೊಂಡಳು.

ಕಳೆದ ಮೇ 11ರಂದು ಸತ್ಯನಾರಾಯಣ ರಾವ್ ತಮ್ಮ ಪತ್ನಿಯನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಕವಿತಾ ಕೂಡ ಅವರ ಜೊತೆ ಆಸ್ಪತ್ರೆಗೆ ಹೋಗಿದ್ದಳು. ಅಲ್ಲಿ ಮನೆಗೆ ಹೋಗಿ ಬರುವುದಾಗಿ ಹೇಳಿ ಸತ್ಯನಾರಾಯಣ ರಾವ್ ಅವರ ಬಳಿ ಯಾವುದೋ ಕಾರಣ ನೀಡಿ ಅವರ ಮನೆ ಕೀಲಿ ತೆಗೆದುಕೊಂಡಿದ್ದಳು.

ದಂಪತಿ ಆಸ್ಪತ್ರೆಯಲ್ಲಿದ್ದಾಗ ಅವರ ಮನೆಯ ಬಾಗಿಲು ಸುಲಭವಾಗಿ ತೆರೆದು ಚಿನ್ನಾಭರಣಗಳನ್ನು ಕದ್ದು ವಾಪಸ್ ಆಸ್ಪತ್ರೆಗೆ ಬಂದಳು. ಮರುದಿನ ಆಸ್ಪತ್ರೆಯಿಂದ ದಂಪತಿ ಮನೆಗೆ ಬಂದಾಗ ಕಳವಾದ ವಿಷಯ ತಿಳಿಯಿತು. ನಂತರ ಕವಿತಾ ವಾಟ್ಸಾಪ್ ನಲ್ಲಿ ಕಳುಹಿಸಿದ ಫೋಟೋದಿಂದ ಆಭರಣಗಳನ್ನು ಕದ್ದಿದ್ದು ಆಕೆ ಎಂದು ಬಹಿರಂಗವಾಯಿತು ಎಂದು ಪೊಲೀಸರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com