ಬಸ್ ಟಿಕೆಟ್ ದರ ಶೇ.18.5ರಷ್ಟು ಹೆಚ್ಚಿಸಲು ಬಿಎಂಟಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

ಸತತ ನಷ್ಟ ಅನುಭವಿಸುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಯಾಣಿಕರ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸತತ ನಷ್ಟ ಅನುಭವಿಸುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಯಾಣಿಕರ ಟಿಕೆಟ್ ದರದಲ್ಲಿ ಶೇಕಡಾ 18.5ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಿದೆ. ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದು ಸರ್ಕಾರ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಬಿಎಂಟಿಸಿ ಅಧಿಕಾರಿಗಳು, 15 ದಿನಗಳ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ಡೀಸೆಲ್ ಬೆಲೆ ಏರಿಕೆ ಹಿನ್ನಲೆಯಲ್ಲಿ ಮತ್ತು ಬಿಎಂಟಿಸಿ ನೌಕರರ ವೇತನ ಹೆಚ್ಚಳದಿಂದ ಸಂಸ್ಥೆಗೆ ಸಾಕಷ್ಟು ನಷ್ಟವಾಗುತ್ತಿದ್ದು ಅದಕ್ಕಾಗಿ ಪ್ರಯಾಣಿಕರ ಟಿಕೆಟ್ ದರ ಹೆಚ್ಚಳ ಮಾಡಿ ನಷ್ಟವನ್ನು ತುಂಬಿಸಬೇಕೆಂದು ಪ್ರಸ್ತಾವನೆಯಲ್ಲಿ ಒತ್ತಾಯಿಸಿದ್ದೇವೆ ಎಂದು ತಿಳಿಸಿದ್ದಾರೆ. ತಿಂಗಳಿಗೆ ಬಿಎಂಟಿಸಿಗೆ 20 ಕೋಟಿಯಿಂದ 25 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎನ್ನುತ್ತಾರೆ ಅವರು.

ಟಿಕೆಟ್ ದರ ಏರಿಕೆ ಪ್ರಸ್ತಾವನೆಗೆ ಸರ್ಕಾರ ಒಪ್ಪಿದರೆ ಸಂಸ್ಥೆಗೆ ಹೆಚ್ಚುವರಿ 220 ಕೋಟಿ ರೂಪಾಯಿಗಳಷ್ಟು ಆದಾಯ ಬರಲಿದೆ ಎಂಬುದು ಅಧಿಕಾರಿಗಳ ಲೆಕ್ಕಚಾರವಾಗಿದೆ. ಏಪ್ರಿಲ್ 2014ರಲ್ಲಿ ಬಿಎಂಟಿಸಿ ಶೇಕಡಾ 15ರಷ್ಟು ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡಿತ್ತು. ಸಂಸ್ಥೆಗೆ ಇದರಿಂದ ಆದಾಯ ಹೆಚ್ಚಳವಾಗಿದ್ದರೂ ಕೂಡ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗುತ್ತಾ ಹೋಯಿತು.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ ಬಸವರಾಜು, ಬಿಎಂಟಿಸಿಯಿಂದ ಇತ್ತೀಚೆಗೆ ಪ್ರಸ್ತಾವನೆ ಬಂದಿದೆ. ಅದನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ. ಸರ್ಕಾರ ಸದ್ಯದಲ್ಲಿಯೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಬೆಂಗಳೂರು ನಗರದಲ್ಲಿರುವ ಸುಮಾರು 6,149 ಬಿಎಂಟಿಸಿ ಬಸ್ ಗಳು ಪ್ರತಿದಿನ 12 ಲಕ್ಷ ಕಿಲೋ ಮೀಟರ್ ಸಂಚರಿಸುತ್ತವೆ. ದಿನಕ್ಕೆ ಸರಾಸರಿ 74 ಲಕ್ಷ ರೂಪಾಯಿ ನಷ್ಟವಾಗುತ್ತದೆ. ಇಂದು ಪ್ರತಿದಿನ ಸುಮಾರು 45 ಲಕ್ಷ ಪ್ರಯಾಣಿಕರು ಬಿಎಂಟಿಸಿ ಸಾರಿಗೆಯನ್ನು ಅವಲಂಬಿಸಿದ್ದಾರೆ. 2012ರಲ್ಲಿ ಸುಮಾರು 52 ಲಕ್ಷ ಪ್ರಯಾಣಿಕರಿದ್ದರು. ಹಲವು ಪ್ರಯಾಣಿಕರು ಇಂದು ಮೆಟ್ರೊ ಅಥವಾ ಕ್ಯಾಬ್ ಗಳನ್ನು ಅವಲಂಬಿಸಿದ್ದಾರೆ ಎನ್ನುತ್ತಾರೆ ಸಂಸ್ಥೆ ಅಧಿಕಾರಿಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com