
ಹುಬ್ಬಳ್ಳಿ: ಮಳೆಗಾಲದಲ್ಲಿ ಟೈಫಾಯ್ಡ್, ವೈರಲ್, ಚಿಕುನ್ ಗುನ್ಯಾ ಜ್ವರಗಳು ಇತ್ತೀಚೆಗೆ ಬರುವುದು ಜಾಸ್ತಿಯಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಅನೇಕ ನಿವಾಸಿಗಳು ಮತ್ತು ಗ್ರಾಮಸ್ಥರು ಕಳೆದ ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದಾರೆ, ಅದಕ್ಕೆ ಕಾರಣ ಚಿಕುನ್ ಗುನ್ಯಾ. ಅವ್ಯಾಹತ ಮಳೆ ಮತ್ತು ಅಶುಚಿತ್ವ ವಾತಾವರಣ ಅನೇಕ ಮಂದಿಗೆ ಚಿಕುನ್ ಗುನ್ಯಾ ಕಾಯಿಲೆ ತರಿಸಿದೆ.
ಇಲ್ಲಿನ ಕೆಲವು ಪ್ರದೇಶಗಳ ಪ್ರತಿ ಮನೆಗಳಲ್ಲಿಯೂ ಚಿಕುನ್ ಗುನ್ಯಾ ರೋಗಿಗಳಿದ್ದಾರೆ ಎನ್ನಬಹುದು. ಈ ಜ್ವರದಿಂದಾಗಿ ಜನರಿಗೆ ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಅತ್ಯಂತ ಸುಧಾರಿತ ಪ್ರದೇಶ ಎಂದು ಎನಿಸಿಕೊಂಡಿರುವ ಜೆ ಪಿ ನಗರದಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚು ಮಂದಿ ಚಿಕುನ್ ಗುನ್ಯಾದಿಂದ ಬಳಲುತ್ತಿದ್ದಾರೆ.
ಹಲವು ಕೇಸುಗಳು ದಾಖಲು: ಹುಬ್ಬಳ್ಳಿ ತಾಲ್ಲೂಕಿನ ಗಮಂಗಟ್ಟಿ ಮತ್ತು ನವಲೂರುಗಳಲ್ಲಿ ಅತಿ ಹೆಚ್ಚು ಮಂದಿ ಚಿಕುನ್ ಗುನ್ಯಾ ಜ್ವರ ಪ್ರಕರಣಗಳು ವರದಿಯಾಗಿವೆ. ಧಾರವಾಡ ತಾಲ್ಲೂಕಿನ ಅಮ್ಮಿನ್ ಬಾವಿ, ಉಪ್ಪಿನ್ ಬೆಟಗೇರಿಗಳಲ್ಲಿ ಸಹ ಚಿಕುನ್ ಗುನ್ಯಾ ಪ್ರಕರಣಗಳು ಹೆಚ್ಚು ಬೆಳಕಿಗೆ ಬಂದಿವೆ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ನಗರ ಪ್ರದೇಶಗಳಲ್ಲಿ ಚಿಕುನ್ ಗುನ್ಯಾ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಆರೋಗ್ಯ ಇಲಾಖೆಯ ವೈದ್ಯ ಡಾ ಎಂ ಸಿ ಸಿಂಧೂರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿ, ಚಿಕುನ್ ಗುನ್ಯಾ ಜ್ವರದ ಲಕ್ಷಣ ಹೊಂದಿರುವ ಕನಿಷ್ಠ 6ರಿಂದ 8 ಮಂದಿ ರೋಗಿಗಗಳಿಗೆ ಪ್ರತಿದಿನ ಚಿಕಿತ್ಸೆ ನೀಡುತ್ತಿದ್ದೇನೆ ಎಂದರು.
ತಡೆಗಟ್ಟುವುದು ಹೇಗೆ:
ದೇಹ ಸಂಪೂರ್ಣವಾಗಿ ಮುಚ್ಚುವ ಬಟ್ಟೆಗಳನ್ನು ಧರಿಸಿ
ಚರ್ಮದ ಕೀಟ ನಿವಾರಕಗಳನ್ನು ದೇಹಕ್ಕೆ ಹಚ್ಚಿಕೊಳ್ಳಿ.
ಮನೆಯ ಸುತ್ತಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ.
ಛಾವಣಿಯ ಗಟಾರಗಳು ಮತ್ತು ಸಸ್ಯಗಳ ಮಡಕೆಗಳನ್ನು ಸ್ವಚ್ಛ ಮಾಡುತ್ತಿರಿ.
Advertisement