ಆತ್ಮಹತ್ಯೆ ಮಾಡಿಕೊಂಡ ಪತಿಯ ಶವವನ್ನು ಸ್ವೀಕರಿಸಲು ಮೂವರು ಪತ್ನಿಯರ ನಕಾರ!
ಬೆಂಗಳೂರು: ನಿನ್ನೆ ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೈಡ್ರಾಮಾ ನಡೆಯಿತು. ಚಂದ್ರಾ ಲೇ ಔಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಶವವನ್ನು ಪಡೆಯಲು ಆತನ ಮೂವರು ಪತ್ನಿಯರು ನಿರಾಕರಿಸಿದ ಘಟನೆ ನಡೆಯಿತು.
ಮೃತ ವ್ಯಕ್ತಿಯನ್ನು ಸಿದ್ದಲಿಂಗಯ್ಯ ಎಂದು ಗುರುತಿಸಲಾಗಿದೆ. ರೈಲ್ವೆ ಕಾಲೊನಿ ನಿವಾಸಿಯಾದ ಈತ ಕೂಲಿ ಕಾರ್ಮಿಕನಾಗಿದ್ದ. ಆತನ ಮೂವರು ಮಡದಿಯರು ಕೂಡ ಕೂಲಿ ಕಾರ್ಮಿಕರಾಗಿದ್ದು ನಾಯಂಡಹಳ್ಳಿ ಸುತ್ತಮುತ್ತ ಪ್ರತ್ಯೇಕವಾಗಿ ನೆಲೆಸಿದ್ದರು. ಕೊನೆಗೆ ಪೊಲೀಸರು ಮನವೊಲಿಸಿ ಮೊದಲ ಪತ್ನಿಗೆ ಆತನ ಅಂತಿಮ ವಿಧಿವಿಧಾನ ನಡೆಸುವಂತೆ ಹೇಳಿ ಶವವನ್ನು ಹಸ್ತಾಂತರಿಸಿದರು.
ಸಿದ್ದಲಿಂಗಯ್ಯ ಮದ್ಯವ್ಯಸನಿಯಾಗಿದ್ದ. ಕಳೆದೆರಡು ತಿಂಗಳುಗಳಿಂದ ಕೆಲಸ ಕೂಡ ಮಾಡುತ್ತಿರಲಿಲ್ಲ. ಕೌಟುಂಬಿಕ ಕಲಹಗಳಿಂದ ಬೇಸತ್ತು ಮೊನ್ನೆ ಗುರುವಾರ ಸಂಜೆ ಮೊದಲ ಪತ್ನಿ ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದ. ಕೆಲಸದಿಂದ ಮನೆಗೆ ಬಂದ ಪತ್ನಿ ಗಂಡನ ಶವ ನೋಡಿ ಕೂಡಲೇ ಚಂದ್ರ ಲೇ ಔಟ್ ಪೊಲೀಸ್ ಠಾಣೆಗೆ ವಿಷಯ ತಿಳಿಸಿದಳು. ಪೊಲೀಸರು ಶವ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿದರು.
ಪತಿಯ ಅಂತಿಮ ದರ್ಶನ ಪಡೆಯಲೆಂದು ಮೂವರು ಪತ್ನಿಯರು ವಿಕ್ಟೋರಿಯಾ ಆಸ್ಪತ್ರೆಗೆ ನಿನ್ನೆ ಬೆಳಗ್ಗೆ ಬಂದಿದ್ದರು. ಪೊಲೀಸರು ಶವವನ್ನು ತೆಗೆದುಕೊಂಡು ಹೋಗುವಂತೆ ಹೇಳಿದಾಗ ಮೂವರೂ ಜಗಳ ಮಾಡಲು ಆರಂಭಿಸಿದರು. ಯಾರು ಕೂಡ ಜವಾಬ್ದಾರಿ ವಹಿಸಲು ಸಿದ್ಧರಿರಲಿಲ್ಲ. ಎರಡನೇ ಪತ್ನಿ ಬಂದ ಮೇಲೆ ತನ್ನನ್ನು ಪತಿ ಬಿಟ್ಟು ಹೋದ ಎಂದು ಮೊದಲ ಪತ್ನಿ ಆರೋಪಿಸಿದರೆ, ಆತನನ್ನು ಮದುವೆಯಾದ ಮೇಲೆ ನನ್ನ ವ್ಯಾಪಾರವೆಲ್ಲ ಹಾಳಾಯಿತು, ನಾನು ಹಾಳಾಗಿ ಹೋದೆ ಎಂದು ಎರಡನೇ ಪತ್ನಿ, ಗಂಡ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ, ಕಿರುಕುಳ ನೀಡುತ್ತಿದ್ದ ಎಂದು ಮೂರನೇ ಪತ್ನಿ ಆರೋಪಿಸಿದಳು.
ಕೊನೆಗೂ ಪೊಲೀಸರು ಪಟ್ಟುಹಿಡಿದು ಮೊದಲ ಪತ್ನಿಯ ಮನವೊಲಿಸಿ ಗಂಡನ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವಂತೆ ಮನವೊಲಿಸಿ ಶವವನ್ನು ನೀಡಿದರು.
ಸಿದ್ದಲಿಂಗಯ್ಯ ಪ್ರತಿದಿನ ಕುಡಿದು ಬಂದು ಪತ್ನಿಯರಲ್ಲಿ ಜಗಳ ಮಾಡುತ್ತಿದ್ದ. ಕಳೆದ ಗುರುವಾರ ಮೊದಲ ಪತ್ನಿ ಮನೆಗೆ ಹೋಗಿದ್ದ. ಪತ್ನಿ ಕೆಲಸಕ್ಕೆ ಹೋಗಿದ್ದಳು, ಈ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಂದಿನ ವಿಚಾರಣೆ ನಡೆಯುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ