ಮುಂದಿನ 3 ದಿನಗಳ ಕಾಲ ಭಾರಿ ಮಳೆ, ಕಾವೇರಿ ತೀರದಲ್ಲಿ ಕಟ್ಟೆಚ್ಚರ

ಮುಂದಿನ ಮೂರು ದಿನಗಳ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಸುರಿಯಲಿದ್ದು, ಕಾವೇರಿ ತೀರದಾದ್ಯಂತ...
ಜಲಾವೃತಗೊಂಡಿರುವ ನಂಜನಗೂಡು
ಜಲಾವೃತಗೊಂಡಿರುವ ನಂಜನಗೂಡು
ಮೈಸೂರು: ಮುಂದಿನ ಮೂರು ದಿನಗಳ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಸುರಿಯಲಿದ್ದು, ಕಾವೇರಿ ತೀರದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಈಗಾಗಲೇ ಭಾರಿ ಮಳೆಯಿಂದಾಗಿ ಕಾವೇರಿ ತೀರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಭಾರಿ ಮಳೆಯಿಂದಾಗಿ ಹಾರಂಗಿ ಜಲಾಶಯ ತುಂಬಿ ತುಳುಕುತ್ತಿದೆ. ಅಧಿಕಾರಿಗಳು ಈಗಾಗಲೇ ಪ್ರವಾಹ ಎಚ್ಚರಿಕೆ ನೀಡಿದ್ದು, ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.
ಇನ್ನು ಕೊಡಗು ಜಿಲ್ಲೆಯಲ್ಲೂ ಮಹಾಮಳೆ ಮುಂದುವರೆದಿದ್ದು, ಭಾಗಮಂಡಲದಲ್ಲಿ ಭಾನುವಾರ 106 ಮಿಲಿ ಮೀಟರ್ ಮಳೆಯಾಗಿದೆ. ಜಿಲ್ಲಾ ಆಡಳಿತ ಕೊಡಗು ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜ್ ಗಳಿಗೆ ಸೋಮವಾರವೂ ರಜೆ ಘೋಷಿಸಿದೆ.
ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಭರ್ತಿಯಾಗಿದೆ. ಕಾವೇರಿ ಹಾಗೂ ಲಕ್ಷ್ಮಣತೀರ್ಥದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಜನತೆಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಮೈಸೂರು - ನಂಜನಗೂಡು ರಾಷ್ಟ್ರೀಯ ಹೆದ್ದಾರಿ 766, ಎಚ್ ಡಿ ಕೋಟೆ, ಸುತ್ತೂರು ಸುತ್ತಲಿನ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ.
ಸುತ್ತೂರಿನಲ್ಲಿ ಸುಮಾರು 100 ಎಕರೆ ಪ್ರದೇಶ ಜಲಾವೃತಗೊಂಡಿದ್ದು, ನಾಟಿ ಮಾಡಿದ್ದ ಭತ್ತದ ಪೈರು ನೀರಿನಲ್ಲಿ ಮುಳುಗಿದೆ. ಎಚ್ ಡಿ ಕೋಟೆಯ ಬೀಚನಹಳ್ಳಿ ಸೇರಿದಂತೆ ನದಿ ತೀರದ ಊರುಗಳುಸ ಹೊಲ-ಗದ್ದೆಗಳಲ್ಲಿ ಹಾಕಿರುವ ಭತ್ತ, ಹತ್ತಿ ಮತ್ತು ತರಕಾರಿ ಬೆಳೆಗಳು ಹಾಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com