ಒಪ್ಪಂದದಂತೆ ಮನೆ ನೀಡದ್ದಕ್ಕೆ ಬಿಲ್ಡರ್ ಗೆ ದಂಡ ಹಾಕಿದ ಗ್ರಾಹಕ ವ್ಯಾಜ್ಯ ಪರಿಹಾರ ನ್ಯಾಯಾಲಯ

ಗ್ರಾಹಕರೊಬ್ಬರಿಗೆ ಅಪಾರ್ಟ್ ಮೆಂಟ್ ನಿರ್ಮಿಸಿಕೊಡಲು ವಿಫಲರಾದ ಬಿಲ್ಡರ್ ಮತ್ತು ಭೂಮಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗ್ರಾಹಕರೊಬ್ಬರಿಗೆ ಸರಿಯಾದ ಸಮಯಕ್ಕೆ ಅಪಾರ್ಟ್ ಮೆಂಟ್ ನಿರ್ಮಿಸಿಕೊಡಲು ವಿಫಲರಾದ ಬಿಲ್ಡರ್ ಮತ್ತು ಭೂಮಿ ಮಾಲೀಕರಿಗೆ ಶೇಕಡಾ 12ರ ಬಡ್ಡಿದರದೊಂದಿಗೆ 6,68,250 ರೂಪಾಯಿಗಳನ್ನು ಮರು ನೀಡುವಂತೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಮೊದಲ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಕೇಂದ್ರ ಆದೇಶ ನೀಡಿದೆ.

ಆಲೆಕಲ್ ತಾಲ್ಲೂಕಿನ ಹೆಬ್ಬಗೋಡಿ ಗ್ರಾಮದಲ್ಲಿ ಎರಡು ಬೆಡ್ ರೂಂನ ಅಪಾರ್ಟ್ ಮೆಂಟ್ ಖರೀದಿಸಲು ರಾಜರಾಜೇಶ್ವರಿನಗರದ ದೀಪ್ತಿ ಶುಕ್ಲ 6.68 ಲಕ್ಷ ರೂಪಾಯಿಗಳನ್ನು ಕಂತುಗಳ ರೂಪದಲ್ಲಿ ನೀಡಿದ್ದರು. ಮನೆಯನ್ನು 2016ರ ಜೂನ್ ನಲ್ಲಿ ನೀಡುವುದಾಗಿ ಹೇಳಿದ್ದರು. ಆದರೆ ಸಮಯ ಕಳೆದರೂ ಬಿಲ್ಡರ್ ಗಳು ಅಪಾರ್ಟ್ ಮೆಂಟ್ ನೀಡಿರಲಿಲ್ಲ.

ಬೇರೆ ದಾರಿ ಕಾಣದೆ ದೀಪ್ತಿ ಕೋರಮಂಗಲದ ಗ್ರಾಹಕ ವ್ಯಾಜ್ಯ ಪರಿಹಾರ ಕೇಂದ್ರದಲ್ಲಿ ಡ್ರೀಮ್ಸ್ ಇನ್ಫ್ರಾ ಇಂಡಿಯಾ ಲಿಮಿಟೆಡ್ ಬಿಲ್ಡರ್ ಗಳು ಮತ್ತು ಭೂಮಿ ಮಾಲೀಕರಾದ ರಾಮೋಜಿ ಗೌಡ, ಬಾಬು ಎಸ್ ಪಾಟೀಲ್ ಮತ್ತು ಸುಧಾಕರ್ ಕೆ ಆರ್ ವಿರುದ್ಧ ದೂರು ನೀಡಿದ್ದರು. ಆದರೆ ಕೇಸನ್ನು ಮೊದಲು ಸಿವಿಲ್ ಕೋರ್ಟ್ ನಲ್ಲಿ ದಾಖಲಿಸಬೇಕಾಗಿತ್ತು ಎಂದು ಆರೋಪಿಸಿ ಪ್ರತಿವಾದಿಗಳು ಪ್ರಕರಣವನ್ನು ವಜಾ ಮಾಡಬೇಕೆಂದು ವಾದಿಸಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ಗ್ರಾಹಕ ವೇದಿಕೆ, ಸೇಲ್ ಅಗ್ರಿಮೆಂಟ್ ನಲ್ಲಿ ಭೂ ಮಾಲೀಕ ರಾಮೋಜಿ ಗೌಡ, ಬಾಬು ಎಸ್ ಪಾಟೀಲ್, ಸುಧಾಕರ್ ಕೆ ಆರ್ ಮತ್ತು ಡ್ರೀಮ್ಸ್ ಇನ್ಫ್ರಾ ಪ್ರೈವೆಟ್ ಲಿಮಿಟೆಡ್ ಪ್ರತಿನಿಧಿಗಳು ಜನರಲ್ ಪವರ್ ಆಫ್ ಅಟೊರ್ನಿ ಹೊಂದಿರುವುದು ತಿಳಿದುಬಂತು.

ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಅಪಾರ್ಟ್ ಮೆಂಟನ್ನು ನಿರ್ಮಿಸಿಕೊಡದೆ ಸೇವೆಯಲ್ಲಿ ವ್ಯತ್ಯಯ ಮಾಡಿ ತೊಂದರೆ ಉಂಟುಮಾಡಿದ್ದರಿಂದ ಪ್ರತಿವಾದಿಗಳಿಗೆ 6,68,250 ರೂಪಾಯಿಗಳನ್ನು ಮರು ನೀಡುವಂತೆ ಗ್ರಾಹಕ ವ್ಯಾಜ್ಯ ಪರಿಹಾರ ನ್ಯಾಯಾಲಯ ಹೇಳಿದೆ. ಅಲ್ಲದೆ ಹಾನಿ ಉಂಟುಮಾಡಿದ್ದಕ್ಕೆ 25 ಸಾವಿರ ರೂಪಾಯಿ ಹಾಗೂ ನ್ಯಾಯಾಲಯಕ್ಕೆ ಅಲೆದಾಟದ ವೆಚ್ಚವೆಂದು 10 ಸಾವಿರ ರೂಪಾಯಿ ನೀಡುವಂತೆ ಕೂಡ ಆದೇಶ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com