

ಬೆಂಗಳೂರು: ಕೊಡಗು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಪ್ರಕೃತಿ ವಿಕೋಪದಿಂದ ನಿರ್ಗತಿಕರಾಗಿರುವವರ ಪುನರ್ವಸತಿಗೆ ದೇಣಿಗೆ ನೀಡುವವರು ನಗದು ರೂಪದಲ್ಲಿ ನೀಡುವುದರ ಬದಲು ಚೆಕ್, ಡಿಡಿ ರೂಪದಲ್ಲಿ ನೇರವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಿಕೊಡುವಂತೆ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಅವರು ನಿನ್ನೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪ್ರವಾಹ ವಿಪತ್ತು ಪರಿಹಾರ ನಿಧಿಗೆ ಎಂದು ಕೆಲವು ಸಂಘ ಸಂಸ್ಥೆಗಳ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿರುವುದು ಗಮನಕ್ಕೆ ಬಂದಿದೆ. ಇಂತಹುದಕ್ಕೆ ಯಾರೂ ಅವಕಾಶ ಮಾಡಿಕೊಡಬೇಡಿ, ದೇಣಿಗೆ ನೀಡಬೇಕೆಂಬ ಇಚ್ಛೆಯುಳ್ಳವರು ನೇರವಾಗಿ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಬಂದು ಚೆಕ್, ಡಿಡಿ ರೂಪದಲ್ಲಿ ದೇಣಿಗೆ ನೀಡಬಹುದು, ಅಥವಾ ಆನ್ ಲೈನ್ ಮೂಲಕ ಅಧಿಕೃತ ಖಾತೆಗೆ ಕಳುಹಿಸಬಹುದು, ನಗದು ರೂಪದಲ್ಲಿ ಬೇಡ, ಅದು ದುರುಪಯೋಗವಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಕೊಡಗು ಜಿಲ್ಲೆಯಿಂದ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಪುನರ್ವಸತಿ ಕಾರ್ಯ ಭರದಿಂದ ಸಾಗುತ್ತಿದೆ. ವಿದ್ಯುಚ್ಛಕ್ತಿಯನ್ನು ಮನೆಮನೆಗಳಿಗೆ ಕಲ್ಪಿಸಲಾಗಿದೆ. ಮನೆ ಕಳೆದುಕೊಂಡವರಿಗೆ ಇನ್ನು ನಾಲ್ಕೈದು ದಿನಗಳಲ್ಲಿ ವೈಯಕ್ತಿಕ ಮನೆಗಳನ್ನು ಸಹ ನಿರ್ಮಿಸಿಕೊಡಲಾಗುವುದು ಎಂದರು.
ಕೊಡಗಿನಲ್ಲಿ ಪ್ರವಾಹ ಮತ್ತು ಭೂಕುಸಿತಕ್ಕೆ ಇದುವರೆಗೆ 7 ಮಂದಿ ಮೃತಪಟ್ಟಿದ್ದು ನಾಲ್ವರು ಕಾಣೆಯಾಗಿದ್ದಾರೆ. ಕಾಣೆಯಾದವರ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ಸಿಕ್ಕಿದಲ್ಲಿ ನೇರವಾಗಿ ನಮಗೆ ಮಾಹಿತಿ ನೀಡಿ, ನಾವು ಸಹಾಯವಾಣಿಯನ್ನು ನೀಡಿದ್ದೇವೆ. ಆ ಮೂಲಕ ಅವರನ್ನು ಸಂಪರ್ಕಿಸಲಾಗುವುದು ಎಂದು ಹೇಳಿದರು.
ಪ್ರವಾಹ ಪೀಡಿತರಿಗೆಂದು ನಾನಾ ಭಾಗಗಳಿಂದ ಬಂದಿರುವ ಹೆಚ್ಚುವರಿ ಅಗತ್ಯ ವಸ್ತುಗಳನ್ನು ಜಿಲ್ಲೆಯ ಹಳ್ಳಿ ಹಳ್ಳಿಗಳಿಗೆ ತಲುಪಿಸಲು ಗ್ರಾಮ ಪಂಚಾಯತಿ ಮೂಲಕ ವಾಹನಗಳಲ್ಲಿ ಜನರಿಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇದಕ್ಕೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ. ಜಿಲ್ಲೆಗೆ ಹೆಚ್ಚುವರಿ ಕೆಲಸಕ್ಕೆ ಮತ್ತೊಬ್ಬ ಹೆಚ್ಚುವರಿ ಜಿಲ್ಲಾಧಿಕಾರಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ಕೊಡಗಿನಲ್ಲಿ ಅವ್ಯಾಹತ ಮಳೆಯಿಂದಾಗಿ ಸುಮಾರು 20 ದಿನಗಳ ಕಾಲ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಪ್ರವಾಹದಲ್ಲಿ ಪುಸ್ತಕಗಳನ್ನು ಕಳೆದುಕೊಂಡ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಸರ್ಕಾರ ಪಠ್ಯ ಪುಸ್ತಕ ಮತ್ತು ನೋಟು ಪುಸ್ತಕಗಳನ್ನು ಒದಗಿಸುತ್ತದೆ. ರಜೆಯ ಸಂದರ್ಭದಲ್ಲಿನ ಪಾಠದ ಕಲಿಕೆಗಾಗಿ ಮಕ್ಕಳಿಗೆ ಶಿಕ್ಷಕರಿಂದ ವಿಶೇಷ ತರಬೇತಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಪ್ರವಾಹ ಪರಿಸ್ಥಿತಿ ತಗ್ಗಿದ ನಂತರ ಖಾಲಿ ಇರುವ ಮನೆಗಳಿಗೆ ದರೋಡೆಕೋರರು ನುಗ್ಗಿ ಕಳ್ಳತನ ಮಾಡುತ್ತಿರುವುದು ಮಾಧ್ಯಮಗಳಿಂದ ತಿಳಿದುಬಂದಿದೆ. ಈ ಬಗ್ಗೆ ಜಿಲ್ಲೆಯ ಪೊಲೀಸ್ ಮುಖ್ಯಸ್ಥರು ಮತ್ತು ಜಿಲ್ಲಾಧಿಕಾರಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ಪಡೆದಿದ್ದೇನೆ. ಮನೆಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕೈಗಾರಿಕಾ ಸಚಿವ ಕೆ ಜೆ ಜಾರ್ಜ್ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸುಮಾರು ಮೂರೂವರೆ ಕೋಟಿ ರೂಪಾಯಿ ಹಣದ ಚೆಕ್ ನ್ನು ಸ್ವೀಕರಿಸಿದರು.