ಬೆಂಗಳೂರು: ಈಗಾಗಲೇ ಸಹಕಾರ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಒಂದು ಲಕ್ಷ ರೂ.ವರೆಗಿನ ಸಾಲಮನ್ನಾ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ ರೈತರು ಹಾಗೂ ಕೃಷಿ ಕಾರ್ಮಿಕರನ್ನು ಖಾಸಗಿ ಸಾಲಗಳಿಂದಲೂ ಮುಕ್ತಗೊಳಿಸಲು ಮುಂದಾಗಿರುವ ಸರ್ಕಾರ ಅದಕ್ಕಾಗಿ "ಋಣ ಪರಿಹಾರ ಅಧಿನಿಯಮ 2018' ಕುರಿತು ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಿದೆ.
ರಾಜ್ಯದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಖಾಸಗಿಯವರಿಂದಲೂ ಸಾಲ ಮಾಡಿದ್ದು, ಅವರನ್ನು ಋಣಮುಕ್ತಗೊಳಿಸುವ ಸಲುವಾಗಿ ಋಣ ಪರಿಹಾರ ಅಧಿನಿಯಮ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಇದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗುತ್ತಿದ್ದು ಅದಕ್ಕಾಗಿ ಅಧಿನಿಯಮವನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿಕೊಡಲಾಗುವುದು. ರಾಷ್ಟ್ರಪತಿಗಳ ಅಂಕಿತ ಬಿದ್ದ ನಂತರ ಅಧಿನಿಯಮ ಜಾರಿಯಾಗಲಿದೆ. ಈ ಹಿಂದೆ 1976 ಮತ್ತು 1980ರಲ್ಲಿ ಋಣ ಪರಿಹಾರ ಅಧಿನಿಯಮ ಜಾರಿಗೆ ತರಲಾಗಿತ್ತು.
ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ 2ಲಕ್ಷ ರೂ.ವರೆಗಿನ ಎನ್‌ಪಿಎ ಸಾಲ, ಸುಸ್ತಿ ಸಾಲ ಮತ್ತು ಮರು ಹೊಂದಾಣಿಕೆ ಸಾಲವನ್ನು ಬಡ್ಡಿ ಸಹಿತ ಮನ್ನಾ ಮಾಡುವ ಕುರಿತು ಸಂಪುಟ ತೀರ್ಮಾನ ಕೈಗೊಂಡು ಈ ಆದೇಶ ಹೊರಡಿಸಲಾಗಿದೆ.
ಸಾಲ ಮನ್ನಾದ ಮೊತ್ತವನ್ನು ನಾಲ್ಕು ಕಂತುಗಳಲ್ಲಿ ಸರ್ಕಾರದಿಂದ ಪಡೆಯಲು ಒಪ್ಪಿಗೆ ನೀಡಿವೆ. ಇದರಿಂದಾಗಿ ಸುಮಾರು 23.17 ಲಕ್ಷ ರೈತರ 30163 ಕೋಟಿ ರೂ. ಸಾಲಮನ್ನಾ ಆಗಲಿದೆ. ತಕ್ಷಣದಿಂದಲೇ ರೈತರು ಋಣಮುಕ್ತರಾಗಲಿದ್ದು, ಅವರಿಗೆ ಋಣಮುಕ್ತ ಪತ್ರವನ್ನೂ ಬ್ಯಾಂಕ್‌ಗಳಿಂದ ನೀಡಲಾಗುವುದು. ನಂತರ ಹೊಸ ಸಾಲ ಪಡೆಯಲು ಅವರು ಅರ್ಹರಾಗಿರುತ್ತಾರೆ.
ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರದಿರುವ ಭೂ ರಹಿತ ಕೃಷಿ ಕಾರ್ಮಿಕರು, ಸಣ್ಣ ರೈತರು ಹಾಗೂ ದುರ್ಬಲ ವರ್ಗದ ವ್ಯಕ್ತಿಗಳು ಖಾಸಗಿಯವರಿಂದ ಪಡೆದಿರುವ ಸಾಲಗಳಿಂದ ಮುಕ್ತರಾಗಲಿದ್ದಾರೆ. 1.25 ಲಕ್ಷ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ,.
ಒಂದೊಮ್ಮೆ ಖಾಸಗಿಯವರು ಬಲವಂತವಾಗಿ ಸಾಲ ವಸೂಲಿ ಮಾಡಲು ಮುಂದಾದರೆ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲು ಅಧಿನಿಯಮದಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಎರಡು ಹೇಕ್ಟೇರ್ ಒಣ ಭೂಮಿ ಹೊಂದಿರುವ ರೈತರು, 1.5-ಎಕರೆ ಮಳೆ ಆಧಾರಿತ ಕೃಷಿ ಭೂಮಿ ಹೊಂದಿರುವ ರೈತರು,ಅರ್ಧ ಎಕರೆ ನೀರಾವರಿ ಭೂಮಿ ಹೊಂದಿರುವ ರೈತರು, 1.20 ಲಕ್ಷ ರೂ. ಮೀರದಿರುವ ಭೂ ರಹಿತ ಕೃಷಿ ಕಾರ್ಮಿಕರು ಇದರ ವ್ಯಾಪ್ತಿಗೆ ಒಳಪಡುತ್ತಾರೆ.