ಮೇಕೆದಾಟು ಯೋಜನೆ: ಡಿಸೆಂಬರ್ 7ರಂದು ಸಚಿವ ಡಿ.ಕೆ. ಶಿವಕುಮಾರ್ ಸ್ಥಳ ಪರಿಶೀಲನೆ

ಮೇಕೆದಾಟು ಯೋಜನೆಯ ವಿಸ್ತೃತ ವರದಿ ಸಿದ್ಧಪಡಿಸಲು ಕೇಂದ್ರ ಜಲ ಆಯೋಗ ಅನುಮತಿ ನೀಡಿರುವುದರಿಂದ ಡಿ.7ರಂದು ಯೋಜನೆಯ ಸ್ಥಳ ...
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್
ಬೆಂಗಳೂರು: ಮೇಕೆದಾಟು ಯೋಜನೆಯ ವಿಸ್ತೃತ ವರದಿ ಸಿದ್ಧಪಡಿಸಲು ಕೇಂದ್ರ ಜಲ ಆಯೋಗ ಅನುಮತಿ ನೀಡಿರುವುದರಿಂದ ಡಿ.7ರಂದು ಯೋಜನೆಯ ಸ್ಥಳ ಪರಿಶೀಲನೆಗೆ ಹೋಗುವುದಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಜಲ ಆಯೋಗ ಮೇಕೆದಾಟು ಯೋಜನೆಯ ವಿಸ್ತೃತ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿರುವುದರಿಂದ ಕೇಂದ್ರಕ್ಕೆ ವರದಿ ಸಲ್ಲಿಸುವ ಮೊದಲು ಸ್ಥಳ ಪರಿಶೀಲನೆ ನಡೆಸಲಾಗುವುದು. ಸ್ಥಳ ಪರಿಶೀಲನೆಗೆ ಅರಣ್ಯ ಇಲಾಖೆ ಅಧಿಕಾರಿಗಳೂ ಆಗಮಿಸಲಿದ್ದಾರೆ ಎಂದರು.
ಈಗಾಗಲೇ ಡಿಪಿಆರ್‌ ಸಿದ್ಧಪಡಿಸಲು ಬಜೆಟ್‌ನಲ್ಲಿ 5 ಕೋಟಿ ರೂ. ಮೀಸಲಿಡಲಾಗಿದೆ. ಸುಮಾರು 64 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಸಮಾನಾಂತರ ಜಲಾಶಯ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಈ ಯೋಜನೆಯಿಂದ ಬೆಂಗಳೂರು ಹಾಗೂ ಸುತ್ತಲಿನ ನಗರಗಳ ಕುಡಿಯುವ ನೀರು ಹಾಗೂ ವಿದ್ಯುತ್‌ ಉತ್ಪಾದನೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಯೋಜನೆಯಿಂದ ತಮಿಳುನಾಡಿಗೆ ಶೇ.95ರಷ್ಟು ಅನುಕೂಲವಾಗಲಿದೆ. ಈ ಯೋಜನೆಯಲ್ಲಿ ಅಲ್ಪ ಪ್ರಮಾಣದಲ್ಲಿ ಖಾಸಗಿ ಜಮೀನು ಮುಳುಗಡೆಯಾಗಲಿದೆ ಎಂದು ಹೇಳಿದ್ದಾರೆ.
ಡಿ.7ರಂದು ಮೇಕೆದಾಟು ಹಾಗೂ ಶಿವನ ಸಮುದ್ರ ನೋಡಿಕೊಂಡು ರಾತ್ರಿ ಕೆಆರ್‌ ಎಸ್‌ಗೆ ತೆರಳಲಾಗುವುದು. ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್‌ ಮಾದರಿಯ ಯೋಜನೆ ಅನುಷ್ಠಾನ ಮಾಡುವ ಕುರಿತು ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಪ್ರವಾಸೋದ್ಯಮ ಸಚಿವರ ಜತೆ ಚರ್ಚಿಸಲಾಗುವುದು.  ಡಿಸ್ನಿಲ್ಯಾಂಡ್‌ ನಿರ್ಮಾಣಕ್ಕೆ ಒಂದು ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಆ ಸಮಿತಿಯಲ್ಲಿ ಮೈಸೂರು ರಾಜವಂಶಸ್ಥರು ಇರಲಿದ್ದಾರೆ ಎಲ್ಲರ ಅಭಿಪ್ರಾಯಗಳನ್ನು ಪಡೆದು ಯೋಜನೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com