ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಪ್ರಕ್ರಿಯೆ 1 ತಿಂಗಳಲ್ಲಿ ಮುಗಿಯಬೇಕು: ಕೃಷ್ಣ ಭೈರೇಗೌಡ

ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ನಿಯಮ ಸರಳಗೊಳಿಸಲು ನಿರ್ಧಾರ ಕೈಗೊಂಡಿರುವ ಸಂಪುಟ ಸಭೆ 1 ತಿಂಗಳೊಳಗೆ ಭೂ ಪರಿವರ್ತನೆ ಪ್ರಕ್ರಿಯೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ನಿಯಮ ಸರಳಗೊಳಿಸಲು ನಿರ್ಧಾರ ಕೈಗೊಂಡಿರುವ ಸಂಪುಟ ಸಭೆ 1 ತಿಂಗಳೊಳಗೆ ಭೂ ಪರಿವರ್ತನೆ ಪ್ರಕ್ರಿಯೆ ಮುಗಿಸಲು ಆದೇಶಿಸಿದೆ.
ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡುವುದಕ್ಕೆ ಇದ್ದ ನಿಯಮ ಸರಳಗೊಳಿಸಲು ಸಂಪುಟ ಸಭೆಯಲ್ಲಿ ಚರ್ಚಿಸಿದ್ದು ಅರ್ಜಿದಾರರು ಭೂ ಪರಿವರ್ತನೆಗೆ ಇನ್ನು ಮುಂದೆ ಒಂದೇ ಅರ್ಜಿ ನಮೂನೆಯಲ್ಲಿ ವಿವರ ಸಲ್ಲಿಸಿದರೆ ಸಾಕು. ಬೇರೆ ಬೇರೆ ಇಲಾಖೆಗೆ ಅರ್ಜಿ ಸಲ್ಲಿಸಬೇಕಾಗಿಲ್ಲ. ಒಂದು ತಿಂಗಳ ಅವಧಿಯಲ್ಲಿ ಪರಿವರ್ತನೆಗೆ ಆದೇಶ ಲಭಿಸಬೇಕು. ಒಂದು ವೇಳೆ ಬೇರೆ ಬೇರೆ ಇಲಾಖೆಗಳಿಂದ ಆಕ್ಷೇಪ ತಿಂಗಳೊಳಗೆ ಸಿಗದೇ ಇದ್ದರೆ ಅನುಮತಿ ದೊರಕಿದೆ ಎಂದೇ ಭಾವಿಸಲಾಗುತ್ತದೆ. 
ರಾಜ್ಯ ಸಚಿವ ಸಂಪುಟದಲ್ಲಿ ಕೃಷಿ ಬಳಕೆಯಿಂದ ಕೃಷಿಯೇತರ ಬಳಕೆಗೆ ಭೂ ಪರಿವರ್ತನೆ ಪ್ರಕ್ರಿಯೆ ಸರಳೀಕರಣಕ್ಕೆ ನಿಯಮಾವಳಿಗೆ ತಿದ್ದುಪಡಿ ತರಲು ತೀರ್ಮಾನ ಕೈಗೊಂಡಿರುವುದರಿಂದ ಅನಗತ್ಯವಾಗಿ ಹಲವಾರು ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ.
ರಾಜ್ಯದಲ್ಲಿ ವಸತಿ, ಮೂಲಸೌಕರ್ಯ,  ಉದ್ಯಮ, ಸೌರವಿದ್ಯುತ್‌, ಪ್ರವಾಸೋದ್ಯಮ ಯೋಜನೆಗಳಿಗೆ ಭೂಮಿಯ ಅಗತ್ಯವಿದೆ. ಆದರೆ, ಭೂ ಪರಿವರ್ತನೆ ಪ್ರಕ್ರಿಯೆ ವಿಳಂಬ ಆಗುತ್ತಿದ್ದರಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತಿತ್ತು. ಆದರೆ, ಇದೀಗ ಸಂಪುಟದಲ್ಲಿ ಕೈಗೊಂಡ ತೀರ್ಮಾನದಿಂದ ಇಡೀ ಭೂ ಪರಿವರ್ತನೆ ಪ್ರಕ್ರಿಯೆ ಆನ್‌ಲೈನ್‌ ಮೂಲಕ ನಡೆಯಲಿದೆ. 
ನಾಡ ಕಚೇರಿ, ತಾಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೂ ಪರಿವರ್ತನೆಗಾಗಿ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು.ಆರ್‌ಟಿಸಿ, ಮ್ಯುಟೇಶನ್‌ ಪತ್ರದ ನಕಲ, ಭಾಗಶಃ ಪರಿವರ್ತನೆಯಾಗಬೇಕಾದರೆ 11 ಇ ಸ್ಕೆಚ್‌, ಪ್ರಮಾಣಪತ್ರ ನೀಡಿದರೆ ಸಾಕು ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com