'ಪ್ರಬುದ್ಧ ಯೋಜನೆ'ಗೆ ಚಾಲನೆ ನೀಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಪರಿಶಿಷ್ಟ ಜಾತಿ ವರ್ಗಗಳ ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಸಂಗಕ್ಕಾಗಿ ಧನಸಹಾಯ ಮಾಡುವ ಪ್ರಬುದ್ಧ ...
ಪ್ರಬುದ್ಧ ಯೋಜನೆ ಮಾಹಿತಿ ಒಳಗೊಂಡ ಕೈಪಿಡಿ ಬಿಡುಗಡೆ ಮಾಡಿದ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇತರರು
ಪ್ರಬುದ್ಧ ಯೋಜನೆ ಮಾಹಿತಿ ಒಳಗೊಂಡ ಕೈಪಿಡಿ ಬಿಡುಗಡೆ ಮಾಡಿದ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇತರರು

ಬೆಂಗಳೂರು: ಪರಿಶಿಷ್ಟ ಜಾತಿ ವರ್ಗಗಳ ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಸಂಗಕ್ಕಾಗಿ ಧನಸಹಾಯ ಮಾಡುವ ಪ್ರಬುದ್ಧ ಯೋಜನೆಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಶುಕ್ರವಾರ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಕೊಡಿಸುವ ಅತ್ಯುತ್ತಮ ಕೆಲಸ ಮಾಡಲಾಗುತ್ತಿದೆ. ನಾನು 1980 ರಲ್ಲಿ ವಿದ್ಯಾರ್ಥಿ ವೇತನ ಪಡೆದುಕೊಂಡೆ ವಿದೇಶದಲ್ಲಿ ವ್ಯಾಸಾಂಗ ಮಾಡಿದ್ದೆ.‌ ಎಂದು ಸ್ಮರಿಸಿಕೊಂಡರು.

ಕೆಲ ಪ್ರತಿಭಾವಂತ ದಲಿತ ಮಕ್ಕಳು ಆರ್ಥಿಕ ಹಾಗೂ ಪರಿಸರದ ತೊಂದರೆಯಿಂದ ಓದಲು ಸಾಧ್ಯವಾಗುವುದಿಲ್ಲ. ಅಂಥ ಮಕ್ಕಳಿಗಾಗಿ ಹೊರದೇಶದಲ್ಲಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥೈರ್ಯ, ಪ್ರಪಂಚ ಜ್ಞಾನ ವಿಕಾಸವಾಗುತ್ತದೆ. ರಾಜ್ಯ ಸರಕಾರ 2001 ರಿಂದ ಈ ಕಾರ್ಯಕ್ರಮ ಪ್ರಾರಂಭ ಮಾಡಿದ್ದು, 197 ವಿದ್ಯಾರ್ಥಿಗಳು ವಿದೇಶದಲ್ಲಿ ಶಿಕ್ಷಣ ಪಡೆದಿದ್ದಾರೆ. ಈ ಪೈಕಿ 78 ವಿದ್ಯಾರ್ಥಿಗಳು ಅಮೆರಿಕಾ ದೇಶವನ್ನೇ ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮುಗಿಸಿದ್ದಾರೆ. ಮುಂದಿನ ದಿನಗಳಲ್ಲಿ ಇತರೆ ರಾಷ್ಟ್ರಗಳಿಗೂ ಕಳುಹಿಸಿ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಸಾಮಾನ್ಯವಾಗಿ ಪದವಿ ಶಿಕ್ಷಣಕ್ಕೆ ವಿದೇಶಕ್ಕೆ ಕಳುಹಿಸಿಕೊಡಲು ಯಾವ ರಾಜ್ಯವೂ ಮುಂದಾಗಿಲ್ಲ. ನಮ್ಮ ಸರಕಾರ ಯುಜಿ ಕಲಿಕೆಗೂ ವಿದೇಶಕ್ಕೆ ಕಳುಹಿಸುತ್ತಿರುವುದು ಪ್ರಶಂಸನೀಯ ಎಂದರು.

ನಮ್ಮಲ್ಲಿ ಶೇಕಡಾ 78 ರಷ್ಟು ಸಾಕ್ಷರತಾ ಪ್ರಮಾಣ ಬೆಳೆದಿದೆ.‌ ಎಸ್‌ಸಿ‌ ಎಸ್ಟಿ ಸಮುದಾಯದಲ್ಲಿ ಇನ್ನು ಶೇಕಡಾ 40ರ ಆಸುಪಾಸಿನಲ್ಲಿದೆ. ಇವರನ್ನು ಶೈಕ್ಷಣಿಕವಾಗಿ ಮುಂದೆ ತರುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆ ಇಂಥ ಸಾಕಷ್ಟು ಕಾರ್ಯಕ್ರಮ‌ ಹಮ್ಮಿಕೊಂಡಿದೆ ಎಂದರು. ಅಂಬೇಡ್ಕರ್‌ ಅವರು ಸಹ ವಿದ್ಯಾರ್ಥಿ ವೇತನ ಪಡೆದೇ ವಿದೇಶದಲ್ಲಿ ವ್ಯಾಸಂಗ ಮಾಡಿ, ಉತ್ತಮ‌ ಸಂವಿಧಾನ ಮಾಡಿದರು.‌ಅದೇ ರೀತಿಯಲ್ಲಿ ಮತ್ತೊಬ್ಬ ಅಂಬೇಡ್ಕರ್‌ ಹೊರಹೊಮ್ಮಬಹುದು ಎಂದರು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, 2001 ರಿಂದ ಎಸ್‌ಸಿ , ಎಸ್‌ಟಿ ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸಿ ವ್ಯಾಸಂಗ ಮಾಡುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಈವರೆಗು 287 ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸಲಾಗಿದ್ದು, ಇದಕ್ಕಾಗಿ 57.65 ಕೋಟಿ ರು. ವ್ಯಯಿಸಲಾಗಿದೆ. ಕಳೆದ ವರ್ಷದಿಂದ ವಿದೇಶದಲ್ಲಿ ವ್ಯಾಸಂಗ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿ ತೋರಿ, ಅರ್ಜಿ ಸಲ್ಲಿಸುತ್ತಿದ್ದಾರೆ. ಈ ವರ್ಷ 250 ಯುಜಿ ಹಾಗೂ 150 ಪಿಜಿ ಶಿಕ್ಷಣ ಕೊಡಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ 120 ಕೋಟಿ ರುಪಾಯಿ ಮೀಸಲಿಡಲಾಗಿದೆ ಎಂದರು.

ವಿದೇಶಿ ವ್ಯಾಸಂಗ ಮಾಡುವ ಇಚ್ಛೆ ಇರುವ ಕುಟುಂಬದ ಆದಾಯ ಮಿತಿ 8 ಲಕ್ಷ ರುಪಾಯಿಗಳವರೆಗೆ ಇದ್ದರೆ ಶೇ.100 ರಷ್ಟು ಉಚಿತ ಶಿಕ್ಷಣ ಕೊಡಿಸಲಾಗುವುದು. 8 ರಿಂದ 15 ಲಕ್ಷ ಆದಾಯ ಇರುವ ಕುಟುಂಬದ ವಿದ್ಯಾರ್ಥಿಗಳಿಗೆ ಶೇಕಡಾ 50 ರಷ್ಟು ವೆಚ್ಚ ಹಾಗೂ ಇದಕ್ಕೂ ಹೆಚ್ಚಿನ ಆದಾಯ ಇರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಶೇಕಡಾ 33 ರಷ್ಟು ಶಿಕ್ಷಣ ವೆಚ್ಚ ಭರಿಸಲಾಗುತ್ತದೆ. ಪುಸ್ತಕ ವೆಚ್ಚ, ವಿದೇಶದಲ್ಲಿ ಉಳಿದುಕೊಳ್ಳಲು ಹಾಗೂ ಇತರೆ ವೆಚ್ಚವನ್ನೂ ಸಹ ಸರಕಾರವೇ ಭರಿಸಲಿದೆ. ಶಿಕ್ಷಣ ಪಡೆದ ವಿದ್ಯಾರ್ಥಿಗಳು ವಾಪಾಸ್‌ ಭಾರತಕ್ಕೆ ಆಗಮಿಸಬೇಕೆಂಬ ಷರತ್ತು ಕೂಡ ವಿಧಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಪ್ರಬುದ್ಧ ಯೋಜನೆ ಮಾಹಿತಿ ಒಳಗೊಂಡ ಕೈಪಿಡಿ ಬಿಡುಗಡೆ ಮಾಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com